ಸೌತಾಂಪ್ಟನ್ : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಮ್ಮ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಕೆಲ ಗೊಂದಲಮಯ ನಿರ್ಧಾರಗಳ ಜೊತೆಗೆ ನೀರಸ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಮಾರಕವಾಗಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಹೇಳಿದ್ದಾರೆ.
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಜರ್ಮನ್ ಬ್ಲ್ಯಾಕ್‌ವುಡ್‌ನ ಅದ್ಭುತ ಬ್ಯಾಟಿಂಗ್ ಮೂಲಕ ವೆಸ್ಟ್ ಇಂಡೀಸ್ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ತಂಡದ ಆಯ್ಕೆಯಲ್ಲಿ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಟ್ಟಿದ್ದರಿಂದ ಪ್ರಶ್ನೆಗಳು ಮೂಡಿದ್ದವು. ನಂತರ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದು, ತಂಡಕ್ಕೆ ಮಾರಕವಾಯಿತು.
ಬ್ರಾಡ್ ಅನುಪಸ್ಥಿತಿ ಮತ್ತು ಪ್ರಥಮ ಇನ್ನಿಂಗ್ಸ್ನಲ್ಲಿ ಬ್ಯಾಟ್ಸ್ಮನ್ಗಳ ವೈಫಲ್ಯ ತಂಡದ ಹಿನ್ನೆಡೆಗೆ ಕಾರಣವಾಯಿತು ಎಂದು 52 ವರ್ಷದ ನಾಸಿರ್ ಹುಸೇನ್ ಹೇಳಿದ್ದಾರೆ. ಈ ಹಿಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಇಂಗ್ಲೆಂಡ್ ತಂಡ, ರೂಟ್ ಅನುಪಸ್ಥಿತಿಯಲ್ಲಿ ಹಿನ್ನಡೆ ಅನುಭವಿಸಿತು ಎಂದಿದ್ದಾರೆ.
ಮೂರು ಪಂದ್ಯಗಳ ಸರಣಿಯ 2ನೇ ಪಂದ್ಯಕ್ಕಾಗಿ ಗುರುವಾರ ಉಭಯ ತಂಡಗಳು ಮ್ಯಾಂಚೆಸ್ಟರ್‌ಗೆ ತೆರಳಲಿವೆ. ಸರಣಿಯನ್ನು ಗೆಲ್ಲಲು ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ಪುನರಾವರ್ತಿಸಬೇಕಾಗುತ್ತದೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.