ಹ್ಯಾಂಪ್‌ಶೈರ್: ಮುಂದಿನ ದಿನಗಳಲ್ಲಿ ನನ್ನಿಂದ ಇನ್ನೂ ಉತ್ತಮ ಬೌಲಿಂಗ್ ಪ್ರದರ್ಶನವಾಗಲಿದೆ ಎಂದು ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಡೇವಿಡ್ ವಿಲ್ಲೆ ಹೇಳಿದ್ದಾರೆ.
ಐರ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ವಿಲ್ಲಿ ತಂಡದ ಗೆಲುವಿನ ರೂವಾರಿಯಾಗಿದ್ದರು.
ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಮೊದಲು ಘೋಷಿಸಿದ್ದ ತಂಡದಲ್ಲಿ ಅವಕಾಶ ಪಡೆದಿದ್ದ ಇವರು, ಅಂತಿಮವಾಗಿ ಟೂರ್ನಿಗೆ ಆಯ್ಕೆಯಾದ ತಂಡದಿಂದ ಹೊರಗುಳಿದಿದ್ದರು. ಇದೀಗ ಒಂದು ವರ್ಷದ ನಂತರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತ್ಯುತ್ತಮ ಸಾಧನೆಯಿಂದ ಸಾಮರ್ಥ್ಯ ನಿರೂಪಿಸಿದ್ದಾರೆ.
ಈ ಬಗ್ಗೆ ತಮ್ಮ ಅನಿಸಿಕೆ ಹೇಳಿಕೊಂಡ ವಿಲ್ಲಿ, ಬೌಲಿಂಗ್ ತರಬೇತುದಾರ ರಿಚರ್ಡ್ ಪೈರಾ ಅವರ ಸಮಯ ಪ್ರಜ್ಞೆ ಹಾಗೂ ನೀಡಿದ ಮಾರ್ಗದರ್ಶನದಿಂದ ನಿನ್ನೆ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಗಳಿಸುವಲ್ಲಿ ಸಾಧ್ಯವಾಯಿತು. ನಿನ್ನೆಯ ಪಂದ್ಯದಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲು ನಾನು ಹಂಬಲಿಸಿದ್ದೆ ಆದರೆ ಸಾಧ್ಯವಾಗಿಲ್ಲ. ಮುಂದಿನ ಪಂದ್ಯಗಳಲ್ಲಿ ಇನ್ನೂ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದ ನಂತರ ಮತ್ತೆ ಇಂಗ್ಲೆಂಡ್ ತಂಡದಲ್ಲಿ ಆಡುತ್ತಿರುವುದು ಸಂತಸ ತಂದಿದೆ. ಈ ವೃತ್ತಿಯನ್ನು ಆನಂದಿಸುವುದೇ ನನ್ನ ಮುಖ್ಯ ಆದ್ಯತೆಯಾಗಿತ್ತು. ಕ್ರಿಕೆಟ್ನಿಂದ ದೂರ ಹೋಗಿದ್ದ ವೇಳೆ ಮರಳಿ ಬರಲು ಸಾಕಷ್ಟು ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರದರ್ಶನವನ್ನು ನನ್ನಿಂದ ನಿರೀಕ್ಷಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯ ಶನಿವಾರ ನಡೆಯಲಿದೆ.