ಹೈದರಾಬಾದ್: ಮುಂಬೈ ಮತ್ತು ಅಹ್ಮದಾಬಾದ್ನಲ್ಲಿ 2021ರ ಐಪಿಎಲ್ ಟೂರ್ನಿಯನ್ನು ಆಯೋಜಿಸುವ ಸಾಧ್ಯತೆ ಇದೆ. ಮುಂಬೈನ 4 ಸ್ಟೇಡಿಯಂಗಳಲ್ಲಿ ಗುಂಪು ಹಂತದ ಪಂದ್ಯಗಳು ಮತ್ತು ಮೊಟೆರಾದಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಏಪ್ರಿಲ್ ಮಧ್ಯಂತರ ಅಥವಾ 2ನೇ ವಾರದಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಮುಂಬೈನ 4 ಸ್ಟೇಡಿಯಂಗಳಲ್ಲಿ ಆಯೋಜಿಸಲು ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
"ಪ್ರಸ್ತುತ ಲೀಗ್ ಪಂದ್ಯಗಳನ್ನು ಮುಂಬೈ - ಬ್ರಾಡ್ಬೋರ್ನ್ ಸ್ಟೇಡಿಯಂ, ವಾಂಖೆಡೆ ಸ್ಟೇಡಿಯಂ, ಡಿ.ವೈ.ಪಾಟೀಲ್ ಸ್ಟೇಡಿಯಂ ಮತ್ತು ರಿಲಯನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ಲೇ-ಆಫ್ ಪಂದ್ಯಗಳು ನವೀಕರಿಸಲಾಗಿರುವ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುವ ನಿರೀಕ್ಷೆಯಿದೆ" ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನು ಓದಿ:ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಯಾದವ್, ತೆವಾಟಿಯಾ, ಕಿಶನ್ರನ್ನು ಅಭಿನಂದಿಸಿದ ಸಚಿನ್
"ಆದರೆ ಇದನ್ನು ಇನ್ನೂ ಅಧಿಕೃತಗೊಳಿಸಲಾಗಿಲ್ಲ. ಪಂದ್ಯಾವಳಿಯನ್ನು ಏಪ್ರಿಲ್ ಮಧ್ಯದಲ್ಲಿ ಅಥವಾ ಏಪ್ರಿಲ್ ಎರಡನೇ ವಾರದಲ್ಲಿ ಆಯೋಜಿಸುವ ಸಾಧ್ಯತೆಯಿದೆ" ಎಂದು ಅವರು ಹೇಳಿದ್ದಾರೆ.
ದೇಶೀಯ ಟೂರ್ನಿಗಳಾದ ಸೈಯದ್ ಮುಷ್ತಾಕ್ ಅಲಿ ಟಿ-20 ಮತ್ತು ವಿಜಯ್ ಹಜಾರೆ ಏಕದಿನ ಪಂದ್ಯಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿರುವ ಬಿಸಿಸಿಐ ಭಾರತದಲ್ಲಿ ನಗದು ಸಮೃದ್ಧ ಟಿ-20 ಪಂದ್ಯಾವಳಿಯನ್ನು ಆಯೋಜಿಸುವ ಆಲೋಚನೆಗೆ ಉತ್ಸಾಹ ನೀಡಿದೆ. ಭಾರತದಲ್ಲಿ ಕೋವಿಡ್ -19 ಕಾರಣ 2020ರ ಆವೃತ್ತಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ಟೂರ್ನಿಯನ್ನು ಆಯೋಜಿಸುತ್ತೇವೆ ಎಂದು ಬಿಸಿಸಿಐ ಈಗಾಗಲೇ ದೃಢಪಡಿಸಿದೆ.