ಲಖನೌ: ಭಾರತ ತಂಡದಲ್ಲಿ ಪವರ್ ಹಿಟ್ಟರ್ ಖ್ಯಾತಿಯ ಸುರೇಶ್ ರೈನಾ ಒಮ್ಮೆ ತಂಡದಿಂದ ಹೊರಬಿದ್ದ ಮೇಲೆ ಮತ್ತೆ ಅವಕಾಶ ಸಿಕ್ಕಿರಲಿಲ್ಲ. ಇದಕ್ಕೆ ಕಾರಣ ಹೇಳಿ ಸರಿಪಡಿಸಿಕೊಳ್ಳುತ್ತೇನೆ ಎಂದು ರೈನಾ ಸಂದರ್ಶನವೊಂದರಲ್ಲಿ ಹೇಳಿದ್ದಕ್ಕೆ, ಆ ಸಂದರ್ಭದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಎಂಎಸ್ಕೆ ಪ್ರಸಾದ್ ಕಾರಣ ಬಿಚ್ಚಿಟ್ಟಿದ್ದಾರೆ.
ಒಂದು ಕಾಲದಲ್ಲಿ ಗೇಮ್ ಫಿನಿಶರ್ ಆಗಿದ್ದ ಅವಕಾಶ ವಂಚಿತರಾಗಿ ತಂಡದಿಂದ ಹೊರಬಿದ್ದ ಮೇಲೆ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡದಿರುವುದೇ ಅವರ ಆಯ್ಕೆ ಮಾಡದಿರಲು ಕಾರಣ ಎಂದು ಪ್ರಸಾದ್ ತಿಳಿಸಿದ್ದಾರೆ.
1999ರಲ್ಲಿ ಕಳಪೆ ಪ್ರದರ್ಶನದಿಂದ ವಿವಿಎಸ್ ಲಕ್ಷ್ಮಣ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ಆದರೆ, ಲಕ್ಷ್ಮಣ್ ಅವರು ದೇಶಿ ಕ್ರಿಕೆಟ್‌ನ ಋತುವಿನಲ್ಲಿ 1400 ರನ್‌ಗಳನ್ನು ಗಳಿಸುವ ಮೂಲಕ ಮತ್ತೆ ಭಾರತ ತಂಡಕ್ಕೆ ಮರಳಿದರು. ನಾವು ಕೂಡ ಅನುಭವಿ ರೈನಾರಿಂದ ಇಂತಹ ಪ್ರದರ್ಶನವನ್ನೇ ಎದುರು ನೋಡಿದೆವು. ಆದರೆ, ರೈನಾರಿಂದ ಅಂತಹ ಪ್ರದರ್ಶನ ಹೊರಬರಲಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ.
ರೈನಾ 2018-19ರ ರಣಜಿಯಲ್ಲಿ ಕೇವಲ 243 ರನ್ಗಳಿಸಿದ್ದರು. ಇನ್ನು ಐಪಿಎಲ್ನಲ್ಲೂ 17 ಪಂದ್ಯಗಳಿಂದ 383 ರನ್ಗಳಿಸಿದ್ದರು. ಈ ಕಾರಣದಿಂದ ಅವರು ಮರಳಿ ರಾಷ್ಟ್ರೀಯ ತಂಡದಲ್ಲಿ ಅವಕಾಶಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರೈನಾ , ಆಯ್ಕೆ ಸಮಿತಿ ಹಿರಿಯ ಆಟಗಾರರ ಬಗ್ಗೆ ಜವಾಬ್ದಾರಿಯುತವಾಗಿ ಗಮನ ಹರಿಸಬೇಕು. ನನ್ನಲ್ಲಿ ಏನಾದರೂ ಕೊರತೆ ಇದ್ದರೆ ಹೇಳಿ. ಕಠಿಣ ಪರಿಶ್ರಮಪಟ್ಟು ತಿದ್ದಿಕೊಳ್ಳುತ್ತೇನೆ ಎಂದು ಹೇಳಿದ್ದರು.
ರೈನಾ ಭಾರತದ ಪರ 226 ಏಕದಿ ಪಂದ್ಯಗಳಿಂದ 5,615 ರನ್, 78 ಟಿ-20 ಪಂದ್ಯಗಳಿಂದ 1604 ರನ್ ಹಾಗೂ 18 ಟೆಸ್ಟ್ ಪಂದ್ಯಗಳಿಂದ 768 ರನ್ಗಳಿಸಿದ್ದರು.