ನವದೆಹಲಿ: ರಾಂಚಿಯಂತಹ ಸಣ್ಣ ಪಟ್ಟಣದಿಂದ ಬಂದ ಧೋನಿ ಇಡೀ ಕ್ರಿಕೆಟ್ ಜಗತ್ತಿನಲ್ಲೇ ಅದ್ಭುತ ನಾಯಕ, ವಿಕೆಟ್ ಕೀಪರ್ ಆಗಿ ಮೆರೆದಿದ್ದಾರೆ. ಕ್ರಿಕೆಟ್ನಲ್ಲಿ ಸಾಧನೆ ಮಾಡಬೇಕು ಎಂದು ಬಯಸುವ ಸಣ್ಣಪುಟ್ಟ ಪಟ್ಟಣಗಳ ಲಕ್ಷಾಂತರ ಯುವಕರಿಗೆ ಧೋನಿ ಸ್ಪೂರ್ತಿಯಾಗಿದ್ದಾರೆ. ಇದೊಂದು ವಿಚಾರ ನನಗೆ ಧೋನಿ ಇಷ್ಟವಾಗಲು ಕಾರಣ ಎಂದು ಭಾರತ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸಾಮ್ಸನ್ ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಮಹಾ ನಗರಗಳಿಂದ ಬಂದ ಕ್ರಿಕೆಟಿಗರೇ ಹೆಚ್ಚು ಭಾರತ ತಂಡದಲ್ಲಿ ಆಡುತ್ತಿದ್ದರು. ಆದರೆ ಕ್ರಿಕೆಟಿನಾಗಲು ಪ್ರತಿಭೆ ಇದ್ದರೆ ಸಾಕು, ಕ್ರಿಕೆಟ್ ಇತಿಹಾಸದ ಅವಶ್ಯಕತೆಯಿಲ್ಲ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಎಂಎಸ್ ಧೋನಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಭಾರತ ತಂಡದ ಭವಿಷ್ಯದ ವಿಕೆಟ್ ಕೀಪರ್ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಸಂಜು ಸಾಮ್ಸನ್ ಧೋನಿ ತಮ್ಮ ಜೀವನದಲ್ಲಿ ಹೇಗೆ ಪ್ರಭಾವ ಬೀರಿದ್ದಾರೆ ಎನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹೌದು, ಧೋನಿ ಭಾಯ್ ನನ್ನಂತಹವರಿಗೆ ಅವರ ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯ ಆಡಿದ ದಿನದಿಂದ ಹಾಗೂ ಪಾಕಿಸ್ತಾನದ ವಿರುದ್ಧ ಪ್ರಸಿದ್ಧ ಶತಕದ ಬಾರಿಸಿದ ದಿನದಿಂದಲೇ ಸ್ಪೂರ್ತಿಯಾಗಿದ್ದಾರೆ ಎಂದು ಗಲ್ಫ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅವರು ಕ್ರಿಕೆಟ್ ಇತಿಹಾಸವೇ ಇಲ್ಲದ ರಾಂಚಿಯಿಂದ ಬಂದವರಾದರೂ, ಅವರ ಸ್ವತಃ ತಮ್ಮಲ್ಲಿದ್ದ ಒಬ್ಬ ಅದ್ಭುತ ಕ್ರಿಕೆಟಿಗನನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು. ಅಲ್ಲದೇ ವಿಶ್ವದ ಅತ್ಯುತ್ತಮ ಫಿನಿಶರ್ ಎಂದು ಕರೆಸಿಕೊಂಡಿದ್ದಾರೆ. ಇದೇ ಕಾರಣದಿಂದ ನನಗೆ ಧೋನಿ ಸ್ಪೂರ್ತಿಯಾಗಿದ್ದಾರೆ. ಏಕೆಂದರೆ ನಾನು ಕೂಡ ಕ್ರಿಕೆಟ್ ಇತಿಹಾಸವಿಲ್ಲದ ಕೇರಳದಂತಹ ಪ್ರದೇಶದಿಂದ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸಂಜು ಸಾಮ್ಸನ್ ಸದ್ಯ ಭಾರತ ಸೀಮಿತ ಓವರ್ಗಳ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಹಾಗೂ ಕನ್ನಡಿಗೆ ಕೆಎಲ್ ರಾಹುಲ್ ಅವರ ಪ್ರತಿಸ್ಪರ್ಧಿಯಾಗಿದ್ದಾರೆ. ಇವರಿಗೆ ಹೆಚ್ಚಿನ ಅವಕಾಶಗಳೇನು ಸಿಕ್ಕದಿದ್ದರೂ, ಸಿಕ್ಕಂತಹ ಒಂದರೆಡು ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. ಆದರೂ ಹಲವಾರು ಕ್ರಿಕೆಟ್ ದಿಗ್ಗಜರು ಈತನಿಗೆ ಹೆಚ್ಚಿನ ಅವಕಾಶ ಕೊಡಬೇಕು ಎಂದು ಬಿಸಿಸಿಐಗೆ ಒತ್ತಾಯಿಸಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಸಾಮ್ಸನ್ ಉತ್ತಮ ಪ್ರದರ್ಶನ ತೋರಿದರೆ ಖಂಡಿತ ಮುಂದಿನ ಟಿ-20 ವಿಶ್ವಕಪ್ಗೆ ಅರ್ಹತೆ ಪಡೆಯಲಿದ್ದಾರೆ.