ಮುಂಬೈ: ವಿಶ್ವಕಪ್ ಸೆಮಿಫೈನಲ್ ಬಳಿಕ ಮೈದಾನಕ್ಕಿಳಿಯದಿದ್ದರೂ ಟೀಂ ಇಂಡಿಯಾ ಹಿರಿಯ ಆಟಗಾರ ಎಂ.ಎಸ್.ಧೋನಿ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಸದ್ಯ ಹೊಸ ಸುದ್ದಿಯೊಂದು ಕೇಳಿಬಂದಿದೆ. ಆದರೆ ಇದು ಅವರ ಕಂಬ್ಯಾಕ್ ಕುರಿತ ಸುದ್ದಿಯಂತೂ ಅಲ್ವೇ ಅಲ್ಲ..!
ಭಾರತೀಯ ಸೇನೆಯ ಬಗ್ಗೆ ಧೋನಿ ವಿಶೇಷ ಅಭಿಮಾನ ಹಾಗೂ ಗೌರವ ಹೊಂದಿದ್ದಾರೆ. ಸ್ವತಃ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ನ ಗೌರವ ಲೆಫ್ಟಿನೆಂಟ್ ಆಗಿರುವ ಧೋನಿ, ವಿಶ್ವಕಪ್ ಬಳಿಕ 15 ದಿನಗಳ ಕಾಲ ಕಾಶ್ಮೀರದಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಸದ್ಯದ ಮಾಹಿತಿ ಪ್ರಕಾರ, ಧೋನಿ ಭಾರತೀಯ ಸೇನೆಯ ಹೆಮ್ಮೆಯ ಸೇನಾನಿಗಳ ಕಥನವನ್ನು ಸರಣಿ ರೂಪದಲ್ಲಿ ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ. ಧೋನಿ ಈ ಹೊಸ ಕಾರ್ಯಕ್ಕೆ ಸ್ಟುಡಿಯೋ ನೆಕ್ಸ್ಟ್ ಕೈಜೋಡಿಸಿದ್ದು 2020ರಲ್ಲಿ ಈ ಸರಣಿ ಬಿಡುಗಡೆಯಾಗಲಿದೆ.
ಧೋನಿಯ ಉದ್ದೇಶಿತ ಸರಣಿ ಕಾರ್ಯಕ್ರಮದಲ್ಲಿ ಪರಮವೀರ ಚಕ್ರ ಹಾಗೂ ಅಶೋಕ ಚಕ್ರ ವಿಜೇತ ಯೋಧರ ರೋಚಕ ಹಾಗೂ ಆಸಕ್ತಿಕರ ಬದುಕಿನ ಘಟನಾವಳಿಯನ್ನು ಕಟ್ಟಿಕೊಡಲಾಗುತ್ತದೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ಬಹುತೇಕ ಮುಕ್ತಾಯವಾಗಿದ್ದು, ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.