ರಾಂಚಿ: ಭಾರತ ತಂಡದ ಮಾಜಿ ನಾಯಕ ಹಾಗೂ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೋವಿಡ್-19 ಫಲಿತಾಂಶ ನೆಗೆಟಿವ್ ಬಂದಿದ್ದು, ಶುಕ್ರವಾರ ಚೆನ್ನೈಗೆ ಪಯಣ ಬೆಳಸಲಿದ್ದಾರೆ ಎಂದು ತಿಳಿದು ಬಂದಿದೆ.
ಯುಎಇಗೆ ತೆರಳುವ ಮುನ್ನ ಚೆನ್ನೈನಲ್ಲಿ 6 ದಿನಗಳ ಕಾಲ ತರಬೇತಿ ಆಯೋಜಿಸಲು ನಿರ್ಧರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಎಲ್ಲಾ ಆಟಗಾರರಿಗೂ ಒಂದು ವಾರ ಮುಂಚಿತವಾಗಿ ಚೆನ್ನೈಗೆ ಬರಲು ತಿಳಿಸಿತ್ತು. ಅಲ್ಲದೆ ಚೆನ್ನೈಗೆ ಧಾವಿಸುವ ಮುನ್ನ ಎಲ್ಲಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿಯೊಂದಿಗೆ ಬರಬೇಕೆಂದು ಸೂಚನೆ ನೀಡಿತ್ತು.
ಅದರಂತೆ ಬುಧವಾರ ಮಹೇಂದ್ರ ಸಿಂಗ್ ಧೋನಿ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದರು. ಇಂದು ಅವರ ವರದಿಯಲ್ಲಿ ನೆಗೆಟಿವ್ ಬಂದಿದೆ. ಹೀಗಾಗಿ ಧೋನಿ ಶುಕ್ರವಾರ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ. ಯುಎಇಗೆ ತೆರಳುವ ಮುನ್ನ ಚೆನ್ನೈನಲ್ಲಿ ಧೋನಿ ಸೇರಿದಂತೆ ಎಲ್ಲಾ ಆಟಗಾರರು ತರಬೇತಿ ನಡೆಸಲಿದ್ದಾರೆ.
ಈ ಅವಧಿಯಲ್ಲಿ ಬಿಸಿಸಿಐ ಪ್ರೋಟೋಕಾಲ್ಗಳ ಪ್ರಕಾರ ಎಲ್ಲಾ ಆಟಗಾರರು 2 ಬಾರಿ ಕೋವಿಡ್ 19 ಟೆಸ್ಟ್ಗೆ ಒಳಪಡಬೇಕಾಗಿದೆ. ಈಗಾಗಲೇ ಕೆಲವು ತಂಡಗಳು ಒಟ್ಟು 5 ಬಾರಿ ಟೆಸ್ಟ್ ಮಾಡಿಸಲು ಹೇಳಿವೆ. ಚೆನ್ನೈ ಸೂಪರ್ಕಿಂಗ್ಸ್ ತಂಡ ಆಗಸ್ಟ್ 21ರಂದು ದುಬೈಗೆ ಪ್ರಯಾಣ ಬೆಳಸಲಿದೆ.
ಚೆನ್ನೈ ಶಿಬಿರದಲ್ಲಿ ಬೌಲಿಂಗ್ ತರಬೇತುದಾರ ಲಕ್ಷ್ಮಿಪತಿ ಬಾಲಾಜಿ ಮಾತ್ರ ಹಾಜರಿರಲಿದ್ದಾರೆ. ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ಸಹಾಯಕ ಕೋಚ್ ಮೈಕೆಲ್ ಹಸ್ಸಿ ಆಗಸ್ಟ್ 22 ರಂದು ದುಬೈನಲ್ಲಿ ತಂಡಕ್ಕೆ ಸೇರುವ ಸಾಧ್ಯತೆ ಇದೆ.