ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಅತೀವ ದುಃಖಕ್ಕೀಡು ಮಾಡಿದೆ ಎಂದು ಅವರ ಮ್ಯಾನೇಜರ್ ಅರುಣ್ ಪಾಂಡೆ ತಿಳಿಸಿದ್ದಾರೆ.
ಭಾನುವಾರ ಬಾಲಿವುಡ್ ನಟ ಹಾಗೂ ಧೋನಿ ಬಯೋಪಿಕ್ ’’ಎಂಎಸ್ ಧೋನಿ: ಅನ್ಟೋಲ್ಡ್ ಸ್ಟೋರಿ’’ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟ ಸುಶಾಂತ್ ಭಾನುವಾರ ಮುಂಬೈನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇವರ ಸಾವಿಗೆ ಸಿನಿಮಾ ನಟರು, ಕ್ರಿಕೆಟಿಗರು ಹಾಗೂ ಕೋಟ್ಯಂತರ ಅಭಿಮಾನಿಗಳು ಸಂತಾಪ ಸೂಚಿಸಿದ್ದರು. ಆದರೆ, ಇವರ ಸಾವು ಧೋನಿ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅವರ ಮ್ಯಾನೇಜರ್, ಗೆಳೆಯ ಹಾಗೂ ಎಂಎಸ್ ಧೋನಿ ಅನ್ಟೋಲ್ಡ್ ಸ್ಟೋರಿ ಸಿನಿಮಾದ ಸಹ ನಿರ್ಮಾಪಕನಾಗಿರುವ ಅರುಣ್ ಪಾಂಡೆ ತಿಳಿಸಿದ್ದಾರೆ.
ಏನಾಗಿದೆ ಎಂದು ನಾವು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ದುಃಖವನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ನಾನು ಇಲ್ಲ. ಮಾಹಿ ಕೂಡ ತುಂಬಾ ದುಃಖಿತರಾಗಿದ್ದಾರೆ. ಇದೊಂದು ದುರಂತ ಘಟನೆ. ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳಿರುತ್ತವೆ. ಸುಶಾಂತ್ಗೆ ಕೇವಲ 34 ವರ್ಷ ವಯಸ್ಸು, ಅವರಿಗಾಗಿ ಶ್ರೀಮಂತ ವೃತ್ತಿ ಜೀವನ ಕಾಯುತ್ತಿತ್ತು ಎಂದು ಪಾಂಡೆ ಹೇಳಿದ್ದಾರೆ.
ಧೋನಿ ಜೀವನ ಚರಿತ್ರಯನ್ನು ಪರದೆ ಮೇಲೆ ತೋರಿಸಲು ತಮಗೆ ಸಾಧ್ಯವಾಗುತ್ತದೆಯೇ ಎಂದು ಚಲನಚಿತ್ರದ ನಿರ್ಮಾಣದ ಸಮಯದಲ್ಲಿ ಸುಶಾಂತ್ ತುಂಬಾ ಕಾಳಜಿವಹಿಸಿದ್ದರು. ಚಲನ ಚಿತ್ರ ಬಿಡುಗಡೆಗೆ ಮೊದಲು ಸುಶಾಂತ್ ತುಂಬಾ ಒತ್ತಡಕ್ಕೆ ಒಳಗಾಗಿದ್ದರು ಎಂದು ಪಿಟಿಐಗೆ ಪಾಂಡೆ ತಿಳಿಸಿದ್ದಾರೆ.
ಧೋನಿಯ ಜೀವಂತ ಕಥೆಯನ್ನು ಅಭಿಮಾನಿಗಳ ಮುಂದೆಕ್ಕೆ ತಲುಪಿಸಬಲ್ಲೇ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ ಅವರ ಲಕ್ಷಾಂತರ ಅಭಿಮಾನಿಗಳು ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ನನಗೆ ಸಾಕಷ್ಟು ಬಾರಿ ಹೇಳುತ್ತಿದ್ದರು. ಆದರೆ, ನನಗೆ ಅವರು ಕಷ್ಟಪಟ್ಟು ಕೆಲಸ ಮಾಡಲಿದ್ದಾರೆ ಎಂದು ನನಗೆ ನಂಬಿಕೆಯಿತ್ತು. ಅದನ್ನು ಅವರು ಮಾಡಿ ತೋರಿಸಿದರು ಎಂದು ಪಾಂಡೆ ಹೇಳಿದ್ದಾರೆ.