ಮುಂಬೈ: ವಿಶ್ವಕಪ್ ನಂತರ ಭಾರತ ತಂಡದ ಹಿರಿಯ ವಿಕೆಟ್ ಕೀಪರ್ ಹಾಗೂ ಮಾಜಿ ನಾಯಕ ಧೋನಿ ನಿವೃತ್ತಿ ಬಗ್ಗೆ ಹಲವಾರು ರೀತಿ ಗೊಂದಲದ ಹೇಳಿಕೆಗಳು ಕೇಳಿ ಬರುತ್ತಿದ್ದು, ಇದೀಗ ಧೋನಿ ಕುರಿತು ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಭಾರತ ತಂಡದ ಆಯ್ಕೆಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಧೋನಿ ನಿವೃತ್ತಿ ಘೋಷಿಸದಿದ್ದರೆ ಅವರ ಆಯ್ಕೆ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು. ಇದೀಗ ಧೋನಿ ತಂಡದ 15ರ ಬಳಗದಲ್ಲಿರುತ್ತಾರೆ, ಆದರೆ 11 ರ ಬಳಗದಲ್ಲಿರುವುದಿಲ್ಲ, ಅವರು ಯುವ ಆಟಗಾರರಿಗೆ ನೆರವಾಗಲಿದ್ದಾರೆ ಎಂಬ ಮಾಹಿತಿ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಭಾರತದಲ್ಲಿ ಅಥವಾ ವಿದೇಶದ ಯಾವುದೇ ಸರಣಿಯಲ್ಲಿ ಇನ್ನು ಮುಂದೆ ಧೋನಿ ತಂಡದ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿರುವುದಿಲ್ಲ. ರಿಷಭ್ ಪಂತ್ ಅವರ ಸ್ಥಾನವನ್ನು ಪಡೆಯಲಿದ್ದು, ಪಂತ್ರಿಗೆ ಮಾರ್ಗದರ್ಶಕರಾಗಿ ಧೋನಿ ನೆರವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧೋನಿ ತಮ್ಮ ನಿವೃತ್ತಿ ಬಗ್ಗೆ ಇದುವರೆಗೂ ಎಲ್ಲೂ ಮಾತನಾಡಿಲ್ಲ. ಆದರೆ ತಂಡಕ್ಕೆ ಭವಿಷ್ಯದಲ್ಲಿ ಉತ್ತಮ ವಿಕೆಟ್ ಕೀಪರ್ ಅಗತ್ಯವಿದೆ ಎಂಬುದು ಅವರಿಗೂ ತಿಳಿದಿದೆ. ಅದಕ್ಕಾಗಿ ಅವರು ಏಕೆ, ಯಾವಾಗ ನಿವೃತ್ತಿಯಾಗಬೇಕು ಎಂಬುದು ಅವರಿಗೆ ಸಂಬಂಧಪಟ್ಟಿದ್ದು. ಖಂಡಿತ ಧೋನಿ ಅವರು ಹೊರ ಹೋಗುತ್ತಾರೆ, ಆದರೆ ಈಗ ಅತುರವೇನು? ಎಂದು ಧೋನಿ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಮಾಹಿತಿ ಮೂಲಗಳಿಂದ ದೊರೆತಿದೆ.
ಪಂತ್‌ಗೆ 22 ರ ಹರೆಯ. ಅವರು ಅಕ್ಟೋಬರ್ಗೆ 23ಕ್ಕೆ ಕಾಲಿಡಲಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಸಹ ಪ್ರಾಯ 34 ದಾಟಿದ್ದು ಪಂತ್ ಭಾರತ ತಂಡದ ಮೊದಲ ಆದ್ಯತೆಯ ಕೀಪರ್ ಆಗಲಿದ್ದಾರೆ. ಉತ್ತಮ ತರಬೇತಿ ಪಡೆದು ವಿಕೆಟ್ ಕೀಪಿಂಗ್ನಲ್ಲಿ ಪ್ರಾಬಲ್ಯ ಸಾಧಿಸಲು ಇದೇ ಸಕಾಲ ಎನ್ನಲಾಗುತ್ತಿದೆ. ಆದರೆ ಜುಲೈ 19 ರಂದು ವಿಂಡೀಸ್ ಪ್ರವಾಸಕ್ಕೆ ತಂಡದ ಆಯ್ಕೆ ನಡೆಯಲಿದ್ದು ಧೋನಿಗೆ ಆಯ್ಕೆ ಸಮಿತಿ ಮಣೆ ಹಾಕುತ್ತದೆಯೇ ಇಲ್ಲವೇ ಎಂದು ಕಾದುನೋಡಬೇಕಿದೆ.