ನವದೆಹಲಿ : ಮಧ್ಯಮ ಓವರ್ಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಗ್ಲೇನ್ ಮ್ಯಾಕ್ಸ್ವೆಲ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ತಂಡಕ್ಕೆ ಉತ್ತಮ ಆಯಾಮ ನೀಡುತ್ತದೆ ಎಂದು ಆರ್ಸಿಬಿ ಡೈರೆಕ್ಟರ್ ಆಫ್ ಕ್ರಿಕೆಟ್ ಮೈಕ್ ಹೆಸನ್ ಹೇಳಿದ್ದಾರೆ.
ಮ್ಯಾಕ್ಸ್ವೆಲ್ ದೀರ್ಘಕಾಲದಿಂದಲೂ ಐಪಿಎಲ್ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ತೋರಿಲ್ಲ. ಆದರೆ, ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 14.25 ಕೋಟಿ ರೂ. ನೀಡಿ ಆರ್ಸಿಬಿ ಖರೀದಿಸಿದೆ. 2020ರ ಐಪಿಎಲ್ನಲ್ಲಿ ಹೀನಾಯ ಪ್ರದರ್ಶನ ತೋರಿದ್ದರಿಂದ ಪಂಜಾಬ್ ತಂಡ ಅವರನ್ನು ರೀಟೈನ್ ಮಾಡಿರಲಿಲ್ಲ.
"ಅವರು(ಮ್ಯಾಕ್ಸ್ವೆಲ್) ಅತ್ಯದ್ಭುತ ಆಟಗಾರ ಮತ್ತು ನಮಗೆ ಮಧ್ಯಮ ಕ್ರಮಾಂಕಕ್ಕೆ ಸೂಕ್ತವಾಗಿದ್ದಾರೆ. ನಮಗೆ ಮಿಡಲ್ ಓವರ್ಗಳಲ್ಲಿ ಬ್ಯಾಟಿಂಗ್ ಮಾಡಬಲ್ಲಂತಹ ಆಟಗಾರನೊಬ್ಬನ ಅಗತ್ಯವಿತ್ತು. ಅವರು ತಂಡ ಸೇರಿರುವುದರಿಂದ ಅಪಾರ ಪ್ರಮಾಣದ ಅನುಭವ ತಂದಿದ್ದಾರೆ" ಎಂದು ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮೈಕ್ ಹೆಸನ್ ತಿಳಿಸಿದ್ದಾರೆ.
ಮ್ಯಾಕ್ಸ್ವೆಲ್ ಪಂದ್ಯವನ್ನು ಏಕಾಂಗಿಯಾಗಿ ತಿರುಗಿಸಬಲ್ಲರು. ನಾವು ಅವರನ್ನು ಕೌಶಲ್ಯ ಹೆಚ್ಚಿಸಿಕೊಂಡಿರುವ ಜಾಗದಲ್ಲೇ ಬಳಸಬೇಕಾಗಿದೆ. ಅದಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಮಾಜಿ ನ್ಯೂಜಿಲ್ಯಾಂಡ್ನ ಕೋಚ್ ಹೇಳಿದ್ದಾರೆ.
"ನಾನು ಅವರೊಂದಿಗೆ ಅವರ ಪಾತ್ರದ ಬಗ್ಗೆ ಸ್ಪಷ್ಟವಾಗಿ ಮಾತನಾಡಲು ಕಾಯುತ್ತಿದ್ದೇನೆ. ಟೂರ್ನಿಗೆ ಕೆಲವೇ ದಿನಗಳಿವೆ. ಅವರು ಯಾವ ಕ್ರಮಾಂದಲ್ಲಿ ಬ್ಯಾಟಿಂಗ್ ಮಾಡಲು ಹೊರಟಿದ್ದಾರೆ ಅನ್ನೋದರ ಬಗ್ಗೆ ಅವರು ಈಗಲೇ ಅರ್ಥ ಮಾಡಿಕೊಂಡರೆ ಉತ್ತಮ.
ಅವರು ಆಕರ್ಷಕ ಕೌಶಲ್ಯಗಳನ್ನು ಹೊಂದಿದ್ದಾರೆ. ಹೆಚ್ಚು ಅನುಭವಿ ಮತ್ತು ನಾಯಕತ್ವದ ಗುಂಪಿನ ಭಾಗವಾಗಿದ್ದಾರೆ" ಎಂದು ಹೆಸನ್ ಮ್ಯಾಕ್ಸ್ವೆಲ್ ಪಾತ್ರದ ಕುರಿತು ತಿಳಿಸಿದ್ದಾರೆ. ಜನವರಿ 9ರಂದು ಆರ್ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿದೆ.