ಬೆಂಗಳೂರು: ಟೀಂ ಇಂಡಿಯಾ ಮಹಿಳಾ ವೇಗಿ ಮಾನ್ಸಿ ಜೋಶಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಮಹಿಳಾ ಟಿ-20 ಚಾಲೆಂಜ್ ಟೂರ್ನಿಯಿಂದ ವಂಚಿತರಾಗಿದ್ದಾರೆ.
ಮಹಿಳಾ ಟಿ-20 ಚಾಲೆಂಜ್ ಟೂರ್ನಿಗಾಗಿ ತಂಡದ ಆಟಗಾರ್ತಿಯರು ಅ. 13ರಂದು ಮುಂಬೈಗೆ ತೆರಳಿದ್ದಾರೆ. ಆದರೆ ಮಾನ್ಸಿ ಜೋಶಿ ಪ್ರಯಾಣ ಬೆಳೆಸಿಲ್ಲ ಎಂದು ತಿಳಿದು ಬಂದಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ಅವರನ್ನು ಕ್ರಮವಾಗಿ ಸೂಪರ್ನೋವಾಸ್, ಟ್ರೈಲ್ ಬ್ಲೇಜರ್ಸ್ ಮತ್ತು ವೆಲಾಸಿಟಿಯ ನಾಯಕಿಯರನ್ನಾಗಿ ಘೋಷಿಸಿದ್ದು, ನವೆಂಬರ್ 4ರಿಂದ ನವೆಂಬರ್ 9ರವರೆಗೆ ಮಹಿಳಾ ಟಿ-20 ಚಾಲೆಂಜ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಿದೆ.
ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಮಾನ್ಸಿ ಜೋಶಿ ಬದಲಿಗೆ 26 ವರ್ಷದ ಮೇಘನಾ ಸಿಂಗ್ ಅವರನ್ನು ನೇಮಕ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷದ ಫೈನಲಿಸ್ಟ್ಗಳಾದ ಸೂಪರ್ನೋವಾಸ್ ಮತ್ತು ವೆಲಾಸಿಟಿ ತಂಡಗಳು 2020ರ ಮಹಿಳಾ ಟಿ-20 ಚಾಲೆಂಜ್ನ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ನಾಲ್ಕು ಪಂದ್ಯಗಳ ಪಂದ್ಯಾವಳಿಯಲ್ಲಿ ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ನ ಕೆಲವು ಪ್ರಮುಖ ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ.