ಆಕ್ಲೆಂಡ್: ಜಿಮ್ಮಿ ನಿಶಾಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರ ಅಬ್ಬರ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ವಿರುದ್ಧದ ಮೊದಲ ಪಂದ್ಯವನ್ನು 5 ವಿಕೆಟ್ಗಳಿಂದ ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್ ತಂಡ 1-0ಯಲ್ಲಿ ಟಿ20 ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಆಕ್ಲೆಂಡ್ನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ಮಳೆಯಿಂದ 16 ಓವರ್ಗಳಿಸಲ್ಪಟ್ಟ ಪಂದ್ಯದಲ್ಲೂ 180 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ನಾಯಕ ಪೊಲಾರ್ಡ್ ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 75 ರನ್ಗಳಿಸಿದರೆ, ಫ್ಯಾಬಿಯನ್ ಅಲೆನ್ 30 ಹಾಗೂ ಫ್ಲೆಚರ್ 34 ರನ್ಗಳಿಸಿದ್ದರು.
ಕಿವೀಸ್ ಪರ ಲೂಕಿ ಫರ್ಗ್ಯುಸನ್ 21ಕ್ಕೆ 5 ವಿಕೆಟ್ ಪಡೆದರೆ, ಸೌತಿ 2 ವಿಕೆಟ್ ಪಡೆದಿದ್ದರು.
ಡಿಎಲ್ಎಸ್ ನಿಯಮದನ್ವಯ ಕಿವೀಸ್ಗೆ 176 ರನ್ಗಳ ಗುರಿ ನಿಗದೀ ಮಾಡಲಾಗಿತ್ತು. ಚೇಸಿಂಗ್ ಆರಂಭಿಸಿದ ಕಿವೀಸ್ 63 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಗಿತ್ತು. ಆದರೆ ಇಂದೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಡೆವೋನ್ ಕಾನ್ವೆ 29 ಎಸೆತಗಳಲ್ಲಿ 41 ರನ್ ಸಿಡಿಸಿ ಚೇತರಿಕೆ ನೀಡಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಆಲ್ರೌಂಡರ್ ನಿಶಾಮ್ 24 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 48, ಮಿಚೆಲ್ ಸ್ಯಾಂಟ್ನರ್ 18 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 31 ರನ್ಗಳಿಸಿ ಗೆಲುವಿನ ರೂವಾರಿಗಳಾದರು.