ನವದೆಹಲಿ: ಗಾಯದಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ಟೆಸ್ಟ್ ಸರಣಿಗೆ ಮರಳಿದ್ದಾರೆ. ಆಸ್ಟ್ರೇಲಿಯಾ ಪಿಚ್ಗೆ ಸರಿಹೊಂದುವ ಬ್ಯಾಟಿಂಗ್ ಸ್ಟೈಲ್ ಹೊಂದಿರುವ ಅವರಿಂದ ಸಿಡ್ನಿ ಟೆಸ್ಟ್ನಲ್ಲಿ ಶತಕ ನಿರೀಕ್ಷಿಸಬಹುದು ಎಂದು ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ವೇಳೆ ಗಾಯಗೊಂಡಿದ್ದರಿಂದ ಅವರನ್ನು ಸೀಮಿತ ಓವರ್ಗಳ ಸರಣಿಯಿಂದ ಹೊರಗಿಟ್ಟು ವಿಶ್ರಾಂತಿ ನೀಡಲಾಗಿತ್ತು. ಈ ವೇಳೆ ಭಾರತ ತಂಡ ಏಕದಿನ ಸರಣಿ ಕಳೆದುಕೊಂಡರೆ, ಟಿ-20 ಸರಣಿಯನ್ನು ಗೆದ್ದುಕೊಂಡಿತ್ತು. ಇದೀಗ ಟೆಸ್ಟ್ ಸರಣಿ ನಡೆಯುತ್ತಿದ್ದು, ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿ 1-1ರಲ್ಲಿ ಸರಣಿಯಲ್ಲಿ ಸಮಬಲ ಸಾಧಿಸಿವೆ.
ಮಾಜಿ ಕ್ರಿಕೆಟಿಗ ಲಕ್ಷ್ಮಣ್, ಎರಡು ಟೆಸ್ಟ್ಗಳಿಂದ 17, 9, 0, 5 ರನ್ ಗಳಿಸಿರುವ ಮಯಾಂಕ್ ಅಗರ್ವಾಲ್ ಜಾಗದಲ್ಲಿ ರೋಹಿತ್ ಸಿಡ್ನಿ ಪಂದ್ಯದಲ್ಲಿ ಕಣಕ್ಕಿಳಿಯಬೇಕು ಎಂದು ಆಶಿಸಿದ್ದಾರೆ.
"ರೋಹಿತ್ ಶರ್ಮಾ ಹಿಂತಿರುಗಿರುವುದರಿಂದ ಭಾರತೀಯ ಕ್ರಿಕೆಟ್ ತಂಡ ತುಂಬಾ ಸಂತೋಷಪಡುತ್ತಿದೆ. ಅದರಲ್ಲೂ ವಿರಾಟ್ ಇಲ್ಲದಿರುವ ಈ ಸಂದರ್ಭದಲ್ಲಿ ಖಂಡಿತಾ ನೀವು ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ ಹೆಚ್ಚಿನ ಅನುಭವವುಳ್ಳ ಆಟಗಾರನನ್ನು ಬಯಸುತ್ತೀರಿ. ಏಕೆಂದರೆ ಈಗ ನಮಗೆ ಸಿಡ್ನಿಯಲ್ಲಿ ಗೆಲುವು ಸಾಧಿಸಿ 2-1ರಲ್ಲಿ ಮುನ್ನಡೆ ಸಾಧಿಸುವ ಉತ್ತಮ ಅವಕಾಶ ಒದಗಿ ಬಂದಿದೆ. ಬಹುಶಃ 3-1ರಲ್ಲಿ ಗೆಲ್ಲಬಹುದು" ಎಂದು ಲಕ್ಷ್ಮಣ್ ಪ್ರಮುಖ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ರೋಹಿತ್ ಶರ್ಮಾ ಆಸೀಸ್ ಪಿಚ್ಗಳಿಗೆ ಹೊಂದುವ ಬ್ಯಾಟ್ಸ್ಮನ್ ಎಂದು ನಾನು ಸದಾ ಭಾವಿಸುತ್ತೇನೆ. ಅವರು ಹೊಸ ಚೆಂಡನ್ನು ಸರಿಯಾಗಿ ನೋಡಿ ಆಡಿದರೆ ಖಂಡಿತಾ ಸಿಡ್ನಿ ಟೆಸ್ಟ್ನಲ್ಲಿ ನಾವು ದೊಡ್ಡ ಶತಕವನ್ನು ನೋಡುವ ಅವಕಾಶ ಸಿಗಲಿದೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಇದನ್ನು ಓದಿ: ಗಂಗೂಲಿ ಹೃದಯ ಅವರು 20 ವರ್ಷದವರಿದ್ದಾಗ ಇದ್ದಷ್ಟೇ ಪ್ರಬಲವಾಗಿದೆ: ಡಾ. ದೇವಿಶೆಟ್ಟಿ