ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅಡುತ್ತಿರುವ ಯವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಧೋನಿ ಸ್ಥಾನಕ್ಕೆ ಮೊದಲ ಸ್ಪರ್ಧಿಯಾಗಲಿದ್ದಾರೆ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ದಾರೆ.
2020ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದು, ಅವರು ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ.
ಎಂ ಎಸ್ ಧೋನಿಯ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿದ್ದ ರಿಷಭ್ ಪಂತ್ ಕಳೆದ ವರ್ಷ ಕಳಪೆ ಪ್ರದರ್ಶನ ತೋರಿದ್ದರಿಂದ ಸೀಮಿತ ಓವರ್ಗಳ ತಂಡದಿಂದ ಹೊರ ಬಿದ್ದಿದ್ದರು. ಇವರ ಜಾಗಕ್ಕೆ ಕನ್ನಡಿಗ ಕೆ ಎಲ್ ರಾಹುಲ್ ಆಯ್ಕೆಯಾಗಿದ್ದಲ್ಲದೆ, ಕಿವೀಸ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
"ಒಂದು ವರ್ಷದ ಹಿಂದೆಯಾಗಿದ್ದರೆ ಧೋನಿ ಸ್ಥಾನಕ್ಕೆ ರಿಷಭ್ ಪಂತ್ ಸೂಕ್ತ ಆಯ್ಕೆಯಲ್ಲ ಎಂದು ಹೇಳುತ್ತಿದ್ದೆ. ಆದರೆ ಪ್ರಸ್ತುತ ಪಂತ್ ತನ್ನ ಜವಾಬ್ದಾರಿಯನ್ನು ಅರಿತು ಬ್ಯಾಟ್ಸ್‌ಮನ್ ಆಗಿ ಉತ್ತಮ ಹೆಜ್ಜೆಯಾಕುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಅವರ ಆಟವನ್ನು ನೋಡಿ, ಅವನು ಆ ಜವಾಬ್ದಾರಿಯನ್ನು ಬಯಸಿದಂತೆ ತೋರುತ್ತಿದೆ. ಅವನು ಉತ್ತಮ ರನ್ ಗಳಿಸಲು, ದೊಡ್ಡ ಇನ್ನಿಂಗ್ಸ್ ನಿರ್ಮಿಸಲು ಬಯಸುತ್ತಿದ್ದಾರೆ. ಆತ ಇದೇ ರೀತಿ ಮುಂದುವರಿದರೆ ಖಂಡಿತ ಧೋನಿ ಸ್ಥಾನಕ್ಕೆ ಮೊದಲ ಸ್ಪರ್ಧಿಯಾಗುತ್ತಾರೆ" ಎಂದು ವಿಂಡೀಸ್ ಲೆಜೆಂಡ್ ಅಭಿಪ್ರಾಯಪಟ್ಟಿದ್ದಾರೆ.
ಕೆ ಎಲ್ ರಾಹುಲ್ ಬಗ್ಗೆಯೂ ಮಾತನಾಡಿದ್ದು, "ಭಾರತ ತಂಡದ ವಿಷಯಕ್ಕೆ ಬಂದಾಗ ಕೆ.ಎಲ್. ರಾಹುಲ್ ವಿಕೆಟ್ ಕೀಪಿಂಗ್ ಮಾಡುವ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು ಎಂದು ನಾನು ಹೇಳಲು ಬಯಸುತ್ತೇನೆ. ಅವರು ಅದ್ಭುತ ಬ್ಯಾಟ್ಸ್‌ಮನ್, ಆದ್ದರಿಂದ ಅವರು ತಮ್ಮ ತಂಡಕ್ಕೆ ಸಾಕಷ್ಟು ರನ್‌ಗಳನ್ನು ತಂದುಕೊಡುವತ್ತ ತಮ್ಮ ಗಮನವನ್ನು ಕೇಂದ್ರಕರಿಸಬೇಕೆಂದು ಭಾವಿಸುತ್ತೇನೆ" ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಪಂತ್ 5 ಪಂದ್ಯಗಳಿಂದ 171 ರನ್ ಗಳಿಸಿದ್ದರೆ, ಕೆ ಎಲ್ ರಾಹುಲ್ 5 ಪಂದ್ಯಗಳಿಂದ 302 ರನ್ ಗಳಿಸಿದ್ದಾರೆ. ಇವರಿಬ್ಬರಿಗೂ ಪ್ರತಿ ಸ್ಪರ್ಧಿಯಾಗಿರುವ ಸಂಜು ಸ್ಯಾಮ್ಸನ್ ಕೂಡ 5 ಪಂದ್ಯಗಳಿಂದ 171 ರನ್ಗಳಿಸಿದ್ದಾರೆ.