ನವದೆಹಲಿ: 1983ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಹಾಗೂ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೊಪ್ರಾ ಅವರಿಗೆ ಬಿಸಿಸಿಐ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಜನವರಿ 12ರಂದು ಮುಂಬೈನಲ್ಲಿ ನಡೆಯುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕೆ. ಶ್ರೀ ಕಾಂತ್ ಹಾಗೂ ಅಂಜುಮ್ ಚೊಪ್ರಾಗೆ ಪ್ರಶಸ್ತಿ ನೀಡಲಿದೆ.
"ಭಾರತದ ಕ್ರಿಕೆಟ್ಗೆ ಶ್ರೀಕಾಂತ್ ಹಾಗೂ ಅಂಜುಮ್ ಅವರು ನೀಡಿರುವ ಸೇವೆಯನ್ನು ಮನದಲ್ಲಿಟ್ಟುಕೊಂಡು ಅವರಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ. ಅವರಿಬ್ಬರೂ ಈ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳು" ಎಂದು ಬಿಸಿಸಿಐ ತಿಳಿಸಿದೆ.
ತಮಿಳುನಾಡಿನಲ್ಲಿ ಕ್ರಿಕೆಟ್ ಕಂಡ ಪ್ರಮುಖ ಆಟಗಾರರಲ್ಲಿ ಮಾಜಿ ನಾಯಕ ಎಸ್. ವೆಂಕಟರಾಘವನ್ ಹಾಗೂ ರವಿಚಂದ್ರನ್ ಅಶ್ವಿನ್ ಜೊತೆ ಶ್ರೀಕಾಂತ್ ಹೆಸರು ಕೂಡಾ ಪ್ರಮುಖವಾಗಿದೆ. ಅವರು 1981 ರಿಂದ 1992 ರವರೆಗೆ ಭಾರತ ಕ್ರಿಕೆಟ್ ತಂಡ ಪ್ರತಿನಿಧಿಸಿದ್ದರು.
62 ವರ್ಷ ಶ್ರೀಕಾಂತ್ ಭಾರತದ ಪರ 43 ಟೆಸ್ಟ್, 2062 ರನ್ಗಳಿಸಿದ್ದಾರೆ. ಶ್ರೀಕಾಂತ್ ವೇಗದ ಬೌಲರ್ಗಳಿಗೆ ಹೆಲ್ಮೆಟ್ ಇಲ್ಲದೆ ಬ್ಯಾಟಿಂಗ್ ನಡೆಸುತ್ತಿದ್ದದ್ದು ಅವರ ಬ್ಯಾಟಿಂಗ್ ವಿಶೇಷತೆಯಾಗಿದೆ. 1983ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 38 ರನ್ಗಳಿಸಿ ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.
1989ರಲ್ಲಿ ಭಾರತ ತಂಡದ ನಾಯಕರಾಗಿದ್ದ ಶ್ರೀಕಾಂತ್, 1992 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. 2009-12ರಲ್ಲಿ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರು ಆಯ್ಕೆ ಮಾಡಿದ ತಂಡವೇ 2011ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು.
ಮತ್ತೊಬ್ಬ ಪ್ರಶಸ್ತಿ ವಿಜೇತರಾದ 42 ವರ್ಷದ ಅಂಜುಮ್ ಚೊಪ್ರಾ ಭಾರತದ ಪರ 12 ಪಂದ್ಯಗಳಿಂದ 548 ರನ್ಗಳಿಸಿದ್ದಾರೆ. 127 ಏಕದಿನ ಪಂದ್ಯವಾಡಿರುವ ಅವರು 18 ಅರ್ಧಶತಕ ಹಾಗೂ 1 ಶತಕದ ನೆರವಿನಿಂದ 2,856 ರನ್ಗಳಿಸಿದ್ದಾರೆ.