ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನೆಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಮತ್ತಷ್ಟು ಮಹತ್ವದ ವಿಚಾರಗಳು ದೊರೆತಿವೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು ವಿಚಾರಣೆ ನಡೆಸಿದಾಗ ಕೆಪಿಎಲ್ ಆಟಗಾರರನ್ನು ಹಾಗೂ ತಂಡದ ಮಾಲೀಕರನ್ನ ಹನಿಟ್ರ್ಯಾಪ್ ಮೂಲಕ ಬೆದರಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಸಿದ ವಿಚಾರ ಬಹಿರಂಗವಾಗಿದೆ.
ಕೆಪಿಎಲ್ ಆಟಗಾರರು ಹಾಗೂ ತಂಡದ ಮಾಲೀಕರನ್ನ ಗುರಿಯಾಗಿಸಿಕೊಂಡು ಬುಕ್ಕಿಗಳು ಮೊದಲು ಒಬ್ಬ ಮಹಿಳೆಯನ್ನು ಕಳುಹಿಸುತ್ತಿದ್ದರು. ಆ ಮಹಿಳೆ ಪ್ರತಿಷ್ಟಿತ ಆಟಗಾರರು ಹಾಗು ಮಾಲೀಕರ ಜೊತೆ ಸೆಕ್ಸ್ ಅಥವಾ ಅಸಭ್ಯವಾಗಿ ವರ್ತಿಸುತ್ತಿದ್ದರು. ಅವರಿಗೆ ಗೊತ್ತಾಗದ ರೀತಿ ವಿಡಿಯೋ ಮಾಡಿ ಬೆದರಿಸಿ, ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬುಕ್ಕಿಗಳು ಇದನ್ನೇ ದಂಧೆ ಮಾಡಿಕೊಂಡಿದ್ದು, ಆಟಗಾರರಿಗೆ ಬ್ಲಾಕ್ಮೇಲ್ ಮಾಡೋದು ಗೊತ್ತಾಗಿದೆ. ಸದ್ಯ ಸಿಸಿಬಿಯಲ್ಲಿ ಕೆಪಿಎಲ್ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿದ್ದೀವಿ. ಈಗಾಗಲೇ ಕೆಲವರು ವಿದೇಶಕ್ಕೆ ಹಾರಿದ್ದಾರೆ, ಎಲ್ಲೇ ಹೋದರೂ ಅವರನ್ನ ಬಂಧಿಸುತ್ತೇವೆ ಎಂದಿದ್ದಾರೆ.
ಕ್ರಿಕೆಟ್ ಆಟವನ್ನು ಸ್ವಚ್ಚಗೊಳಿಸುವ ತನಿಖೆ ನಡೀತಿದೆ. ತನಿಖೆ ಕೆಪಿಎಲ್ನಿಂದ ಐಪಿಎಲ್‌ವರೆಗೂ ಮುಟ್ಟಬಹುದು. ಸಾಕ್ಷಿಗಳು ಸಿಕ್ಕರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಸದ್ಯ ಬಿಸಿಸಿಐ ಕೂಡಾ ಈ ಬಗ್ಗೆ ಮಾಹಿತಿ ಪಡೆಯುತ್ತಿದೆ ಎಂದಿದ್ದಾರೆ.