ನವದೆಹಲಿ: ಆರ್ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋಲು ಕಾಣುತ್ತಿದ್ದಂತೆ ಕೆಲವು ಮಾಜಿ ಕ್ರಿಕೆಟಿಗರು ನಾಯಕ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿದ್ದರು. ಆದರೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾತ್ರ ಕೊಹ್ಲಿ ಬದಲಾವಣೆ ಶಾಶ್ವತ ಪರಿಹಾರವಲ್ಲ ಎಂದು ವಾದಿಸಿದ್ದಾರೆ.
2013ರಿಂದ ಆರ್ಸಿಬಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಇಲ್ಲಿಯವರೆಗೆ ಟ್ರೋಫಿ ಗೆದ್ದಿಲ್ಲ. 2016ರಲ್ಲಿ ಫೈನಲ್ ಪ್ರವೇಶಿಸಿತ್ತಾದರೂ ಸನ್ರೈಸರ್ಸ್ ವಿರುದ್ಧ ಸೋಲು ಕಂಡಿತ್ತು.
ತಂಡ ಉತ್ತಮವಾಗಿದ್ದರೆ ನಾಯಕ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾನೆ. ವಿರಾಟ್ ಭಾರತ ತಂಡವನ್ನು ಮುನ್ನಡೆಸಿ ಅನೇಕ ಗೆಲುವುಗಳನ್ನು ಪಡೆದಿದ್ದಾರೆ. ಅವರು ಟೆಸ್ಟ್, ಟಿ20 ಏಕದಿನ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಆರ್ಸಿಬಿ ನಾಯಕನಾಗಿ ಅವರು ವಿಫಲರಾಗಿದ್ದಾರೆ, ಇದಕ್ಕೆ ಕಾರಣ ತಂಡ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಕ್ರಿಕ್ಬಜ್ಗೆ ತಿಳಿಸಿದ್ದಾರೆ.
ನಾಯಕನಿಗೆ ಉತ್ತಮ ತಂಡ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಹಾಗಾಗಿ ಆರ್ಸಿಬಿ ಮ್ಯಾನೇಜ್ಮೆಂಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಯಾವುದೆ ನಿರ್ಧಾರ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅದರ ಬದಲು ತಂಡದ ಸಂಯೋಜನೆಯನ್ನ ಉತ್ತಮಗೊಳಿಸಲು ಗಮನ ನೀಡಬೇಕು. ತಂಡ ಉತ್ತಮ ಪ್ರದರ್ಶನ ನೀಡಬೇಕಾದರೆ ಯಾರನ್ನು ಸೇರಿಸಿಕೊಂಡರೆ ಒಳ್ಳೆಯದು ಎಂದು ಯೋಚನೆ ಮಾಡಬೇಕು ಎಂದು ಸೆಹ್ವಾಗ್ ಕೊಹ್ಲಿ ನಾಯಕತ್ವ ಬದಲಾವಣೆ ವಿಚಾರವನ್ನು ತಳ್ಳಿಯಾಕಿದ್ದಾರೆ.
ಆರ್ಸಿಬಿ ಈ ಆವೃತ್ತಿಯ ಮೊದಲಾರ್ಧದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು. ಆದರೆ ದ್ವಿತೀಯಾರ್ಧದ ಕೊನೆಯ 4 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿ ಟೂರ್ನಿಯಲ್ಲಿ 4ನೇ ಸ್ಥಾನ ಪಡೆದಿತ್ತು. ಪ್ಲೇ ಆಪ್ನಲ್ಲೂ ಕಳೆಪೆ ಬ್ಯಾಟಿಂಗ್ ಪ್ರದರ್ಶಿಸಿ ಎಸ್ಆರ್ಹೆಚ್ ವಿರುದ್ಧ 6 ವಿಕೆಟ್ಗಳ ಸೋಲು ಕಂಡಿತ್ತು.