ಮುಂಬೈ: ಭಾರತ ತಂಡ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಏಕದಿನ ಹಾಗೂ ಟೆಸ್ಟ್ ಸರಣಿ ಸೋಲನುಭವಿಸಿದೆ. ಕೊಹ್ಲಿ ಕೂಡ ಮೇಲಿಂದ ಮೇಲೆ ಹಲವು ಸರಣಿಗಳಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿ ವೇಳೆ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕೊಹ್ಲಿ ನ್ಯೂಜಿಲ್ಯಾಂಡ್ ಪ್ರವಾಸದ ಆರಂಭದಲ್ಲೇ ಬಿಸಿಸಿಐ ವೇಳಾಪಟ್ಟಿಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಆ ಕಾರಣದಿಂದಲೇ ಮುಂದಿನ ದಕ್ಷಿಣ ಆಫ್ರಿಕಾ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇವರ ಜೊತೆ ಹಿರಿಯ ಆಟಗಾರರಾದ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾಗೂ ಕೂಡ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
ಬಿಸಿಸಿಐ ಈಗಾಗಲೆ ಎಂಎಸ್ಕೆ ಪ್ರಸಾದ್ಗೆ ಮುಂದಿನ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಲು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಈ ಸರಣಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಪಾಲ್ಗೊಳ್ಳದಿರುವ ಹಿನ್ನಲೆಯಲ್ಲಿ ನಾಯಕತ್ವ ಜವಾಬ್ದಾರಿ ಯಾರಿಗೆ ಸಿಗಲಿದೆ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.
![Kohli rested against SA ODI series](https://etvbharatimages.akamaized.net/etvbharat/prod-images/jghke_0203newsroom_1583157568_605.jpg)
ನಾಯಕತ್ವ ರೇಸ್ನಲ್ಲಿ ಮೂವರು ಸ್ಪರ್ಧಿಗಳು
ಒಂದು ವೇಳೆ ಬಿಸಿಸಿಐ ಕೊಹ್ಲಿಗೆ ವಿಶ್ರಾಂತಿ ನೀಡಿದ್ದೇ ಆದಲ್ಲಿ ಗಾಯದಿಂದ ಚೇತರಿಸಿಕೊಂಡು ಬಂದಿರುವ ಎಡಗೈ ಓಪನರ್ ಶಿಖರ್ ಧವನ್ಗೆ ನಾಯಕತ್ವ ಸಿಗುವ ಅವಕಾಶ ಹೆಚ್ಚಿದೆ. ಇವರ ಜೊತಗೆ ಕನ್ನಡಿಗರಾದ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ ಹೆಸರು ಕೂಡ ಕೇಳಿ ಬರುತ್ತಿದೆ.
ಧವನ್ ತಂಡದ ಹಿರಿಯ ಆಟಗಾರನಾಗಿದ್ದಾರೆ. ಈಗಾಗಲೆ ಹಲವು ಬಾರಿ ತಂಡದ ಉಪನಾಯಕ ಜವಾಬ್ದಾರಿ ನಿರ್ವಹಿಸಿದ್ದಾರೆ. ಕೆಎಲ್ ರಾಹುಲ್ ಕಿವೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್ ಗಾಯಗೊಂಡು ಮೈದಾನ ತೊರೆದಾಗ ತಂಡವನ್ನು ಮುನ್ನಡೆಸಿದ್ದರು. ಇವರಿಬ್ಬರಿಗೆ ಸ್ಪರ್ಧಿಯಾಗಿ ಕರ್ನಾಟಕ ಮತ್ತೊಬ್ಬ ಅನುಭವಿ ಆಟಗಾರ ಮನೀಷ್ ಪಾಂಡೆ ಕೂಡ ಕ್ಯಾಪ್ಟನ್ ರೇಸ್ನಲ್ಲಿದ್ದಾರೆ. ಮನೀಷ್ ಹಲವು ಪ್ರವಾಸಗಳಲ್ಲಿ ಭಾರತ ಎ ತಂಡವನ್ನು ಹಾಗೂ ಕರ್ನಾಟಕ ತಂಡವನ್ನು ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟಿ20 ಸರಣಿಯಲ್ಲಿ ಮುನ್ನಡೆಸಿರುವ ಅನುಭವ ಹೊಂದಿದ್ದಾರೆ.
ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.