ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ತಂಡದ ನಾಯಕನಾಗಿ, ವಿಶ್ವಕಪ್ನಲ್ಲಿ ರನ್ ಹೊಳೆ ಹರಿಸಿದ ರೋಹಿತ್ ಶರ್ಮಾ ವರ್ಷದ ಏಕದಿನ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ಬುಧವಾರ ವಾರ್ಷಿಕ ಪ್ರಶಸ್ತಿ ವಿಜೇತರ ಹೆಸರನ್ನು ಬಿಡುಗಡೆಗೊಳಿಸಿದ್ದು ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ಶರ್ಮಾ 2019ರ ಐಸಿಸಿ ಏಕದಿನ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹಿಟ್ಮ್ಯಾನ್ 2019ರಲ್ಲಿ ವಿಶ್ವಕಪ್ ಸೇರಿದಂತೆ 7 ಏಕದಿನ ಶತಕ ಸಿಡಿಸಿದ್ದರು. ಅಲ್ಲದೇ ವರ್ಷದಲ್ಲಿ ಅತಿ ಹೆಚ್ಚು ರನ್ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
ರನ್ ಮಷಿನ್ ವಿರಾಟ್ ಟೆಸ್ಟ್ ಕೊಹ್ಲಿ ಐಸಿಸಿ ವರ್ಷದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನ ಐಸಿಸಿ ಶ್ರೇಯಾಂಕದಲ್ಲಿ ನಂಬರ್ ಒನ್ ಆಗಿರುವ ಕೊಹ್ಲಿ ಎರಡು ತಂಡದ ಕ್ಯಾಪ್ಟನ್ ಪಟ್ಟ ಪಡೆದಿರುವುದು ವಿಶೇಷವಾಗಿದೆ. ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವುದೇ ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಐಸಿಸಿ ಟೆಸ್ಟ್ ತಂಡದಲ್ಲಿ ಕೊಹ್ಲಿ ಜೊತೆಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವಕಾಶ ಪಡೆದಿದ್ದಾರೆ. ರೋಹಿತ್ ಶರ್ಮಾ, 2019ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಮೊಹಮ್ಮದ್ ಶಮಿ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
2019ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಬಾರಿಸಿರುವ ಮಾರ್ನಸ್ ಲಾಬುಶೇನ್ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿ, 2019ರ ಟೆಸ್ಟ್ ಆವೃತ್ತಿಯಲ್ಲಿ 59 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 2019ರ ಟೆಸ್ಟ್ ಬೌಲರ್ , ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ತಂದುಕೊಟ್ಟ ಇಂಗ್ಲೆಂಡ್ನ ಆಲ್ರೌಂಡರ್ ಬೆನ್ಸ್ಟೋಕ್ಸ್ಗೆ ಐಸಿಸಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಗ್ಯಾರಿ ಸೋಬರ್ಸ್ ಅವಾರ್ಡ್ ಪಡೆದಿದ್ದಾರೆ. ವರ್ಷದಲ್ಲಿ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕ್ರಿಕೆಟಿಗನಿಗೆ ನೀಡಲಾಗುತ್ತದೆ. ಬೆನ್ಸ್ಟೋಕ್ಸ್ ಅವರು ಆಸ್ಟ್ರೇಲಿಯಾ ವಿರುದ್ಧ ಏಕಾಂಗಿ ಹೋರಾಟ ನಡೆಸಿ ಗೆಲ್ಲಿಸಿಕೊಟ್ಟ ಪಂದ್ಯ ಕ್ರಿಕೆಟ್ನ ಅತ್ಯುತ್ತಮ ಇನ್ನಿಂಗ್ಸ್ ಎಂಬ ಖ್ಯಾತಿ ಪಡೆದಿತ್ತು.