ಕ್ರೈಸ್ಟ್ಚರ್ಚ್: ಟೆಸ್ಟ್ ಕ್ರಿಕೆಟ್ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದ ಕೊಹ್ಲಿ ಪಡೆಗೆ ನ್ಯೂಜಿಲ್ಯಾಂಡ್ ತಂಡ ವೈಟ್ವಾಶ್ ಮುಖಭಂಗದ ರುಚಿ ತೋರಿಸಿದ್ದು, ಈ ಮೂಲಕ ಟೆಸ್ಟ್ನಲ್ಲಿ ಟೀಂ ಇಂಡಿಯಾ 8 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಸರಣಿ ಸೋಲು ಕಂಡಿದೆ.
ಸೋಲು ಕಾಣುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಎರಡು ಟೆಸ್ಟ್ ಪಂದ್ಯಗಳಲ್ಲಿ ವೃದ್ಧಿಮಾನ್ ಸಾಹಾ ಬಿಟ್ಟು ರಿಷಭ್ ಪಂತ್ಗೆ ಅವಕಾಶ ನೀಡಿದ್ದರ ಬಗ್ಗೆ ಮಾತನಾಡಿದ ಕೊಹ್ಲಿ, ಸ್ಟಂಪ್ ಹಿಂದೆ ಪಂತ್ ಕಠಿಣ ಅಭ್ಯಾಸ ನಡೆಸಿದ್ದರು. ನಮ್ಮ ಪ್ರಕಾರ ಟೆಸ್ಟ್ನಲ್ಲಿ ಆತ ಉತ್ತಮ ಪ್ರದರ್ಶನ ನೀಡುತ್ತಾನೆಂದು ನಾವೆಲ್ಲ ಅಂದುಕೊಂಡಿದ್ದೆವು. ಆದ್ರೆ ನಾವು ಅಂದುಕೊಂಡ ರೀತಿ ನಡೆಯಲಿಲ್ಲ. ರಹಾನೆ, ಪೂಜಾರಾ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ ಎಂದರು. ತಂಡದಲ್ಲಿ ಯಾರೂ ತಮ್ಮ ಇಷ್ಟದ ರೀತಿ ನಡೆದುಕೊಳ್ಳಲು ಬಿಡಲ್ಲ. ಪ್ರತಿಭೆ ಇರುವ ಆಟಗಾರರಿಗೆ ಖಂಡಿತವಾಗಿ ಅವಕಾಶ ಸಿಕ್ಕಿದೆ ಎಂದರು.
ಇದೇ ವೇಳೆ, ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆ ವೇಳೆ ಕ್ಯಾಪ್ಟನ್ ಕೊಹ್ಲಿ ತಾಳ್ಮೆ ಕಳೆದುಕೊಂಡು ಅವರು ವಿರುದ್ಧ ವಾಗ್ದಾಳಿ ನಡೆಸಿರುವ ಘಟನೆ ಸಹ ನಡೆದಿದೆ. ಎರಡನೇ ಟೆಸ್ಟ್ ಪಂದ್ಯದ ವೇಳೆ ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸ್ನ ಹಾಗೂ ಟಾಮ್ ಲ್ಯಾಥಮ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಆಕ್ರಮಣಕಾರಿಯಾಗಿ ಕೊಹ್ಲಿ ಸಂಭ್ರಮಾಚರಣೆ ಮಾಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ ಪತ್ರಕರ್ತನೋರ್ವ, ನಿಮ್ಮ ಆಕ್ರಮಣಶೀಲತೆ ಕಡಿಮೆಗೊಳಿಸಕೊಳ್ಳಬೇಕು ಎಂದು ಅನಿಸುತ್ತದೆಯಾ ಎಂದು ಕೇಳಿದರು. ಇದಕ್ಕೆ ಅರ್ಧ ಜ್ಞಾನದೊಂದಿಗೆ ಇಲ್ಲಿಗೆ ಬರಬೇಡಿ ಎಂದು ಹರಿಹಾಯ್ದಿದ್ದಾರೆ.