ಲಂಡನ್: ಲಾಕ್ಡೌನ್ ಹಿನ್ನೆಲೆಯಲ್ಲಿ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿರುವ ಕ್ರಿಕೆಟಿಗರೊಂದಿಗೆ ಕೆಲವು 'ಪರಿಚಿತ ಭ್ರಷ್ಟರು' ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.
ಕೊರೊನಾ ಸೋಂಕನ್ನು ತಡೆಯುವ ಉದ್ದೇಶದಿಂದ ಜಾಗತಿಕವಾಗಿ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ಮಾರ್ಚ್ 15ರಂದು ನಡೆದ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ನಂತರ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ.
'ಆಟಗಾರರು ಹಿಂದೆಂದಿಗಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅವರೊಂದಿಗೆ ಸಂಪರ್ಕ ಸಾಧಿಸಿ ಮುಂದಿನ ದಿನಗಳಲ್ಲಿ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಕೆಲ ಭ್ರಷ್ಟರು ಈ ಸಮಯ ಬಳಸಿಕೊಳ್ಳಲು ಮುಂದಾಗಿರುವುದನ್ನು ನಾವು ನೋಡುತ್ತಿದ್ದೇವೆ' ಎಂದು ಮಾರ್ಷಲ್ ಹೇಳಿದ್ದಾರೆ.
'ಕೋವಿಡ್-19 ಪರಿಣಾಮ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮತ್ತು ದೇಶೀ ಕ್ರಿಕೆಟ್ ಪಂದ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರೂ ಭ್ರಷ್ಟರು ಸಕ್ರಿಯರಾಗಿದ್ದಾರೆ' ಎಂದು ಮಾರ್ಷಲ್ ಹೇಳಿದ್ದಾರೆ. ಈಗಾಗಲೇ ಐಸಿಸಿ ಸದಸ್ಯರು ಆಟಗಾರರಿಗೆ ಈ ಬಗ್ಗೆ ತಿಳಿಸಿದ್ದು, ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ ಎಂದು ಮಾರ್ಷಲ್ ಮಾಹಿತಿ ನೀಡಿದ್ದಾರೆ.