ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಸತತ ಮೂರು ಐಪಿಎಲ್ಗಳಲ್ಲಿ 500 ಕ್ಕೂ ಹೆಚ್ಚು ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ರಾಹುಲ್ 2018ರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದಾರೆ. ಅವರು 2018ರಲ್ಲಿ 659 ರನ್, 2019ರಲ್ಲಿ 593 ರನ್ ಹಾಗೂ ಪ್ರಸ್ತುತ ಐಪಿಎಲ್ನಲ್ಲಿ ಕೇವಲ 9 ಪಂದ್ಯಗಳಲ್ಲಿ 525 ರನ್ಗಳಿಸಿ ಮುನ್ನುಗ್ಗುತ್ತಿದ್ದಾರೆ. ರಾಹುಲ್ರನ್ನು ಹೊರೆತುಪಡಿಸಿದರೆ, ಸಚಿನ್, ಕೊಹ್ಲಿ ಹಾಗೂ ರೈನಾ ತಲಾ 2 ಬಾರಿ ಐಪಿಎಲ್ನಲ್ಲಿ 500 ಪ್ಲಸ್ ರನ್ಗಳಿಸಿದ್ದಾರೆ.
ಒಟ್ಟಾರೆ ಐಪಿಎಲ್ನಲ್ಲಿ ನೋಡುವುದಾದರೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಆರ್ಸಿಬಿ ಪರವಾಗಿ 2011ರಿಂದ 2013ರವರೆಗೆ ಸತತ 3 ಬಾರಿ 500 ಕ್ಕೂ ಹೆಚ್ಚು ರನ್ಗಳಿಸಿದ್ದರು. ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಹೆಚ್ಚು ಬಾರಿ ಈ ಸಾಧನೆ ಮಾಡಿದ್ದಾರೆ. ಅವರು 2014, 2015, 2016, 2017 ಹಾಗೂ 2019ರ ಆವೃತ್ತಿಗಳಲ್ಲಿ 500 ಕ್ಕೂ ಹೆಚ್ಚು ರನ್ ದಾಖಲಿಸಿದ್ದಾರೆ. ಅಲ್ಲದೆ 2015, 17 ಹಾಗೂ 19ರಲ್ಲಿ ಆರೆಂಜ್ ಕ್ಯಾಪ್ ಪಡೆದ ದಾಖಲೆ ಕೂಡ ಅವರ ಹೆಸರಿನಲ್ಲಿದೆ.
ವಿಶೇಷವೆಂದರೆ 2017ರಿಂದ ಸತತವಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್ಗಳೇ ಆರೆಂಜ್ ಕ್ಯಾಪ್ ಪಡೆಯುತ್ತಿದ್ದಾರೆ.