ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇಂದು ಅಬುಧಾಬಿಯಲ್ಲಿ ಬುಧವಾರ ನಡೆಯುವ ಐಪಿಎಲ್ನ 39ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಪ್ಲೇ ಆಫ್ ಕನಸಿನಲ್ಲಿರುವ ಕೆಕೆಆರ್ ತಂಡದ ಪ್ರಮುಖ ಆಟಗಾರ ಆ್ಯಂಡ್ರೆ ರಸೆಲ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.
ಆರ್ಸಿಬಿ 13ನೇ ಆವೃತ್ತಿಯಲ್ಲಿ 6 ಗೆಲುವು ಹಾಗೂ 3 ಸೋಲಿನೊಂದಿಗೆ 12 ಅಂಕ ಹೊಂದಿದ್ದು, 3ನೇ ಸ್ಥಾನದಲ್ಲಿದೆ. ಕೆಕೆಆರ್ 4 ಸೋಲು ಹಾಗೂ 5 ಗೆಲುವಿನೊಂದಿಗೆ 4ನೇ ಸ್ಥಾನದಲ್ಲಿದೆ. ಈ ಪಂದ್ಯ ಎರಡು ತಂಡಳಿಗೂ ಪ್ಲೇ ಆಫ್ ದೃಷ್ಟಿಯಿಂದ ಪ್ರಮುಖ ಪಂದ್ಯವಾಗಿದೆ.
ಆದರೆ, ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೊಳಗಾಗಿದ್ದ ಆ್ಯಂಡ್ರೆ ರಸೆಲ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಒಂದು ವೇಳೆ, ರಸೆಲ್ ಇಂದಿನ ಪಂದ್ಯದಲ್ಲಿ ಆಡದಿದ್ದರೆ, ಅನುಮಾನಸ್ಪದ ಬೌಲಿಂಗ್ ಶೈಲಿ ಆರೋಪದಿಂದ ಮುಕ್ತವಾಗಿರುವ ಸುನಿಲ್ ನರೈನ್ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಸನ್ರೈಸರ್ಸ್ ವಿರುದ್ಧದ ಪಂದ್ಯದ ವೇಳೆಯೇ ನರೈನ್ ಬೌಲಿಂಗ್ ಆ್ಯಕ್ಷನ್ ಸರಿಯಾಗಿದೆ ಎಂದು ಐಪಿಎಲ್ ಸಮಿತಿಯಿಂದ ತೀರ್ಪು ಪಡೆದಿದ್ದರು. ಆದರೆ, ಆರೋಗ್ಯ ಸಮಸ್ಯೆ ಎದುರಿಸಿದ್ದರಿಂದ ಅವರನ್ನು ಮತ್ತಷ್ಟು ಸಮಸ್ಯೆಗೀಡು ಮಾಡುವುದಕ್ಕೆ ಫ್ರಾಂಚೈಸಿ ಬಯಸದೇ ವಿಶ್ರಾಂತಿ ನೀಡಿತ್ತು ಎಂದು ನಾಯಕ ಮಾರ್ಗನ್ ತಿಳಿಸಿದ್ದರು. ಹಾಗಾಗಿ ಇಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.