ಮುಂಬೈ: ಮೊದಲ ಟಿ -20 ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿ ತುಂಬಾ ಒತ್ತಡಕ್ಕೊಳಗಾಗಿದ್ದ ಖಲೀಲ್ ಅಹಮ್ಮದ್ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಖಲೀಲರ ಆ ಪ್ರದರ್ಶನದ ಹಿಂದೆ ನಾಯಕ ರೋಹಿತ್ ಶರ್ಮಾ ಇದ್ದರು ಎಂಬುದನ್ನು ಸ್ವತಃ ಖಲೀಲ್ ಬಹಿರಂಗ ಪಡಿಸಿದ್ದಾರೆ.
ಮೊದಲ ಟಿ-20 ಪಂದ್ಯದಲ್ಲಿ 48 ರನ್ ನೀಡಿದ್ದ ಖಲೀಲ್ ತುಂಬಾ ಒತ್ತಡಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ನಾಯಕ ರೋಹಿತ್ 21 ವರ್ಷದ ಯುವಕನ ಬೆನ್ನಿಗೆ ನಿಂತು, ಆತ್ಮಸ್ಥೈರ್ಯ ತುಂಬುವ ಮೂಲಕ ಖಲೀಲ್ಅವರಿಗಿದ್ದ ಒತ್ತಡವನ್ನು ನಿವಾರಿಸಿದ್ದರು.
"ರೋಹಿತ್ ನನಗೆ ಧೈರ್ಯ ಹೇಳಿದ್ದಲ್ಲದೆ, ನಿನಗೆ ಹೇಗೆ ಬೇಕೋ ಹಾಗೆ ಬಿಂದಾಸ್ ಆಗಿ ಬೌಲಿಂಗ್ ಮಾಡು ಎಂದು ಆತ್ಮವಿಶ್ವಾಸ ತುಂಬಿದರು. ಇದು ನನಗೆ ಎರಡನೇ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಲು ನೆರವಾಯಿತು" ಎಂದು ಖಾಸಗಿ ಮಾದ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಖಲೀಲ್ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಖಲೀಲ್ 27 ರನ್ ನೀಡಿ 2 ವಿಕೆಟ್ ಪಡೆದಿದ್ದರು.
ಖಲೀಲ್ಗೆ ಈಗ ಕೇವಲ 21 ವರ್ಷದ ಹರೆಯ, ಈ ಹಿಂದೆ ಆಶಿಸ್ ನೆಹ್ರಾ, ಜಹೀರ್ ಖಾನ್ ಮಾತ್ರ ಭಾರತ ಕ್ರಿಕೆಟ್ನ ಯಶಸ್ವಿ ಎಡಗೈ ಬೌಲರ್ ಆಗಿದ್ದರು. ಇವರಿಬ್ಬರ ನಂತರ ಬಂದ ಆರ್.ಪಿ.ಸಿಂಗ್ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಇರ್ಫಾನ್ ಪಠಾಣ್ ಯಶಸ್ವಿಯಾದರೂ ಗಾಯದ ಸಮಸ್ಯೆ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಮಾಡಿತು. ನಂತರ ಬಂದ ಮತ್ತೊಬ್ಬ ಯುವ ಬೌಲರ್ ಜಯದೇವ್ ಉನಾದ್ಕಟ್ ಕೂಡ ಪರಿಣಾಮಕಾರಿಯಾಗಲಿಲ್ಲ. ಇದೀಗ ಬಹಳ ವರ್ಷಗಳ ಕಾಲ ಎಡಗೈ ಬೌಲರ್ ಒಬ್ಬ ತಂಡಕ್ಕೆ ಸೇರ್ಪಡೆಯಾಗಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭವಿಷ್ಯದಲ್ಲಿ ಈತನ ಪ್ರದರ್ಶನ ಭಾರತ ತಂಡಕ್ಕೆ ಬಹಳ ಉಪಯುಕ್ತವಾಗಲಿದೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.