ಶಿವಮೊಗ್ಗ: ಇಲ್ಲಿನ ನವಲೆಯ ಕೆಎಸ್ಸಿಎ ಮೈದಾನದಲ್ಲಿ ನಡೆದ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡಗಳ ನಡುವಿನ ರಣಜಿ ಪಂದ್ಯ ಡ್ರಾದಲ್ಲಿ ಮುಕ್ತಾಯ ಕಂಡಿದೆ. ಮಧ್ಯಪ್ರದೇಶ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿ, 3 ಅಂಕ ಪಡೆಯಬೇಕೆಂಬ ಕರ್ನಾಟಕದ ಆಸೆಗೆ ಮಧ್ಯಪ್ರದೇಶದ ಆದಿತ್ಯ ಶ್ರೀವಾಸ್ತವ್ ಅಡ್ಡಗಾಲು ಹಾಕಿದರು.
ಕರ್ನಾಟಕ ತಂಡದ ಎದುರು 5 ರನ್ಗಳ ಇನ್ನಿಂಗ್ಸ್ ಮುನ್ನಡೆ ಗಳಿಸಿದ ಮಧ್ಯಪ್ರದೇಶ, 3 ಅಂಕಗಳನ್ನು ಕಲೆ ಹಾಕಿದೆ. ರಣಜಿ ಟ್ರೋಫಿ ಪಂದ್ಯದಲ್ಲಿ ಎಲೈಟ್ 8ನೇ ಸುತ್ತಿನ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ 3ನೇ ದಿನ ನಿರಾಸ ಪ್ರದರ್ಶನ ನೀಡಿತ್ತು. ಕೊನೆಯ ದಿನವಾದ ಇಂದು ಚುರುಕಿನ ಬೌಲಿಂಗ್ ನಡೆಸಿತು.
ಚುರುಕು ಬೌಲಿಂಗ್ ಮೂಲಕ ಮಧ್ಯಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅನ್ನು ಕಟ್ಟಿ ಹಾಕಿದರು. ನಿನ್ನೆ 80 ರನ್ ಗಳಿಸಿ ಅಜೇಯರಾಗುಳಿದ ವೆಂಕಟೇಶ್ ಅಯ್ಯರ್ ಇಂದು ಆಟ ಮುಂದುವರೆಸಿದ್ದರು. ಇವರನ್ನು 86 ರನ್ಗೆ ಔಟ್ ಮಾಡಿ ಪೆವಿಲಿಯನ್ಗೆ ಕಳುಹಿದರು. ಅದರಂತೆ ಶತಕಗಳಿಸಿದ್ದ ಆದಿತ್ಯ ಶ್ರೀವಾಸ್ತವ್, ಇಂದು ಮತ್ತೆ 83 ರನ್ ಗಳಿಸಿ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ನೀಡಿ ಹಾಗೂ ತಂಡಕ್ಕೆ 3 ಅಂಕಗಳನ್ನು ತಂದುಕೊಡುವಲ್ಲಿ ಸಫಲರಾದರು.
ಕೊನೆಯಲ್ಲಿ ಮಧ್ಯಪ್ರದೇಶ 154.6 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 431 ರನ್ ಕಲೆ ಹಾಕಿತು. ನಂತರ 2ನೇ ಇನ್ಸಿಂಗ್ಸ್ ಪ್ರಾರಂಭಿಸಿದ ಕರ್ನಾಟಕ 15 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿತ್ತು. ಚಹಾ ವಿರಾಮಕ್ಕೂ ಮುನ್ನ ಎರಡು ತಂಡಗಳ ನಾಯಕರ ಒಪ್ಪಿಗೆ ಪಡೆದು ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲಾಯಿತು.
ನಿನ್ನೆ ಕಳಪೆ ಫಿಲ್ಡಿಂಗ್ ಹಾಗೂ ಬೌಲಿಂಗ್ ನಿಂದ ಕರ್ನಾಟಕ ತಂಡ ಎದುರಾಳಿಗೆ ಬೆಲೆ ತೆತ್ತಿತ್ತು. ಆದರೆ ಇಂದು ಮೊನಚಾದ ಬೌಲಿಂಗ್ನಿಂದ ಕಟ್ಟಿ ಹಾಕಿದರು. ವೆಂಕಟೇಶ್ ಅಯ್ಯರ್ 86 ರನ್ಗೆ 3 ವಿಕೆಟ್ ಪಡೆದರು. ಕುಮಾರ್ ಕಾರ್ತೀಕೇಯ ಹಾಗೂ ರವಿಯಾದವ್ರನ್ನು ಮಿಥುನ್ ಶೂನ್ಯಕ್ಕೆ ಔಟ್ ಮಾಡಿದರು. ಮಧ್ಯ ಪ್ರದೇಶದ ತಂಡದ ವಿಕೆಟ್ ಒಂದು ಕಡೆ ಉರುಳುತ್ತಿದ್ದರೆ, ಇನ್ನೊಂದೆಡೆ ಜವಾಬ್ದಾರಿಯುತ ಆಟ ಆಡಿ ಇನ್ನಿಂಗ್ಸ್ ಕಟ್ಟಿದ ಆದಿತ್ಯ ಶ್ರೀ ವಾಸ್ತವ್ 192 ರನ್ ಗಳಿಸಿದರು. ಇವರಿಗೆ 11ನೇ ಆಟಗಾರ ಕುಲದೀಪ್ ಸೇನ್ 23ರನ್ ಗಳಿಸಿ ಸಾಥ್ ನೀಡಿದ್ದಲ್ಲದೆ, ತಂಡವನ್ನು ಇನ್ನಿಂಗ್ಸ್ನಿಂದ ಪಾರು ಮಾಡಿದರು.
ಕರ್ನಾಟಕದ ಪರ ಅಭಿಮನ್ಯು ಮಿಥುನ್ 3, ರೂಹಿರ್ ಮೊರೆ ಹಾಗೂ ಕೆ.ಗೌತಮ್ ತಲಾ ಎರಡು ವಿಕೆಟ್ ಪಡೆದುಕೊಂಡರು. ಕರ್ನಾಟಕ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ 4ನೇ ಗೆಲುವು ಪಡೆದು ನಾಕೌಟ್ ಹಾದಿಯನ್ನು ಸುಗುಮಗೊಳಿಸುವ ತವಕದಲ್ಲಿ ಮಧ್ಯಪ್ರದೇಶ ಇತ್ತು. ಆದರೆ, ಮಧ್ಯಪ್ರದೇಶ ತಂಡ ಉತ್ತಮ ಪ್ರದರ್ಶನ ನೀಡಿ ಪಂದ್ಯ ಡ್ರಾ ಮಾಡಿಕೊಂಡಿದೆ. ಕರ್ನಾಟಕ ತಂಡ ರಣಜಿ ಕೊನೆಯ ಲೀಗ್ ಪಂದ್ಯಾವಳಿಗೆ ತಲುಪಬೇಕಾದರೆ, ಮುಂಬರುವ ಬರೋಡ ತಂಡದ ಎದುರು ಜಯಗಳಿಸುವ ಅನಿವಾರ್ಯತೆಯಲ್ಲಿದೆ. ಶಿವಮೊಗ್ಗದಲ್ಲಿ ರಣಜಿ ಕ್ರಿಕೆಟ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.