ವಿಜಯನಗರಂ: ಸಯ್ಯದ್ ಮುಷ್ತಾಕ್ ಅಲಿ ಟಿ20 ಸರಣಿಯಲ್ಲಿ ಕರ್ನಾಟಕದ ಜಯದ ಓಟ ಮುಂದುವರಿದಿದ್ದು ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ವಿರುದ್ಧ 35 ರನ್ಗಳಿಂದ ಗೆಲುವು ಸಾಧಿಸಿ ಸೂಪರ್ ಲೀಗ್ ಹಂತಕ್ಕೆ ಅರ್ಹತೆಗಿಟ್ಟಿಸಿದೆ.
ಆಂದ್ರದ ವಿಜಯನಗರಂನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಟಾಸ್ ಸೋತರು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ಆರಂಭಿಕರ ವೈಫಲ್ಯದ ನಡುವೆಯೂ 172 ರನ್ಗಳಿಸಿತು. ಟೂರ್ನಿಯಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪವನ್ ದೇಶಪಾಂಡೆ ಕೇವಲ 32 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 63 ರನ್ಗಳಿಸಿದರು. ಕೆಎಲ್ ರಾಹುಲ್ 34 ರನ್ಗಳಿಸಿ ಪವನ್ಗೆ ಸಾಥ್ ನೀಡಿದರು.
ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಗೋವಾದ 21 ವರ್ಷದ ಹೆರಾಂಬ್ ಪರಬ್ 5 ವಿಕೆಟ್ ಪಡೆದು ಕರ್ನಾಟಕದ ಘಟಾನುಘಟಿಗಳನ್ನು ಪೆವಿಲಿಯನ್ಗಟ್ಟಿದರು. ಇವರಿಗೆ ಸಾತ್ ನೀಡಿದ ಅಮೂಲ್ಯ ಪಂಡ್ರೇಕರ್ 2, ಲಕ್ಷ್ಯ ಗರ್ಗ್ ಹಾಗೂ ಮಲ್ಲಿಕ್ಸಾಬ್ ಸಿರೂರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
173 ರನ್ಗಳ ಗುರಿ ಪಡೆದ ಗೋವಾ ಉತ್ತಮ ಆರಂಭದ ನಡುವೆಯೂ 19.3 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ 35 ರನ್ಗಳ ಜಯ ಸಾಧಿಸಿತು. ಆರಂಭಿಕ ಬ್ಯಾಟ್ಸ್ಮನ್ ಆದಿತ್ಯ ಕೌಶಿಕ್ 48, ಮಲ್ಲಿಕ್ಸಾಬ್ ಸಿರೂರ್ 27 ಹಾಗೂ ಸುಯಶ್ ಪ್ರಭುದೇಸಾಯಿ 28 ರನ್ಗಳಿಸಿ ಗೆಲುವಿಗಾಗಿ ಹೋರಾಟ ನಡೆಸಿ ವಿಫಲರಾದರು.
ಕರ್ನಾಟಕ ಉತ್ತಮ ಬೌಲಿಂಗ್ ದಾಳಿ ನಡೆಸಿದ ಅಭಿಮನ್ಯು ಮಿಥುನ್ 2, ರೋನಿತ್ ಮೊರೆ 2, ಶ್ರೇಯಸ್ ಗೋಪಾಲ್ 3, ಪ್ರವೀಣ್ ದುಬೆ 2 ಹಾಗೂ ಸುಚಿತ್ ಒಂದು ವಿಕೆಟ್ ಪಡೆದು ಕೈಜಾರುತ್ತಿದ್ದ ಪಂದ್ಯವನ್ನು ಉಳಿಸಿಕೊಂಡರು.
ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ ಲೀಗ್ಗೆ ಅರ್ಹತೆ ಪಡೆದುಕೊಂಡಿತು. ನವೆಂಬರ್ 21 ರಂದು ನಡೆಯುವ ಸೂಪರ್ ಲೀಗ್ನಲ್ಲಿ ಕರ್ನಾಟಕ ಬಿ ಗುಂಪಿನ ದ್ವಿತೀಯ ಸ್ಥಾನಿ ರಾಜಸ್ಥಾನದ ಸವಾಲನ್ನು ಎದುರಿಸಲಿದೆ.
5 ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೂಪರ್ ಲೀಗ್ಗೆ ಅರ್ಹತೆಪಡೆದುಕೊಳ್ಳಲಿವೆ. ಇಲ್ಲಿ ಎಲ್ಲಾ ತಂಡಗಳು ತಲಾ ನಾಲ್ಕು ಪಂದ್ಯಗಳನ್ನಾಡಲಿದ್ದು ಹೆಚ್ಚು ಅಂಕ ಪಡೆಯುವ ಮೊದಲೆರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.