ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲಲು ಕಾರಣರಾಗಿದ್ದು ಯುವ ಆಟಗಾರರು. ಭಾರತದ ಉತ್ತಮ ಪ್ರದರ್ಶನದ ಹಿಂದೆ ಕನ್ನಡಿಗರ ಶ್ರಮವಿದೆ. ಹೌದು, ಆಸೀಸ್ ನೆಲದಲ್ಲಿ ಕಾಂಗರೂಗಳನ್ನು ಮಣಿಸಿದ ಯುವಕರನ್ನು ವಿಶ್ವವೇ ಪ್ರಶಂಸಿಸುತ್ತಿದೆ. ಆದರೆ ಆ ಯುವಕರು ಇಂತಹ ದಿಟ್ಟ ಪ್ರದರ್ಶನ ನೀಡಲು ಕಾರಣವಾಗಿದ್ದು ಇಬ್ಬರು ಕನ್ನಡಿಗರು. ಈ ಯುವ ಕ್ರಿಕೆಟಿಗರ ಮೇಲೆ ಅವರು ತೋರಿದ ವಿಶ್ವಾಸ ಇಂದು ಭಾರತ ಟೆಸ್ಟ್ನ ನಂಬರ್ ಒನ್ ತಂಡವಾಗಿ ಹೊರಬರಲು ಕಾರಣವಾಗಿದೆ.
ಆಸೀಸ್ ಸರಣಿಗೆ ಉತ್ತಮ ತಂಡ ನೀಡಿದ ಆಯ್ಕೆ ಸಮಿತಿ:ಈ ಸಲ ಭಾರತ ಆಡುವ ಹನ್ನೊಂದರ ಬಳಗ ಮಾತ್ರವಲ್ಲ, ಬೆಂಚ್ ಕಾಯುತ್ತಿದ್ದ ಯುವ ಆಟಗಾರರು ಕೂಡ ಅಷ್ಟೇ ಸಮರ್ಥರಾಗಿದ್ದರು. ಅಳೆದು ತೂಗಿ ಆಯ್ಕೆ ಸಮಿತಿ ಉತ್ತಮ ಆಟಗಾರರನ್ನು ಆಸೀಸ್ ಪ್ರವಾಸಕ್ಕೆ ಆಯ್ಕೆ ಮಾಡಿದ್ದರು. ಈ ಹಿಂದೆ ಬೆಂಚ್ ಕಾಯುವ ಆಟಗಾರರು ಅಷ್ಟು ಸಮರ್ಥರಾಗಿರುತ್ತಿರಲಿಲ್ಲ. ನೀರು, ಗ್ಲೌಸ್ ಬ್ಯಾಟು, ಪ್ಯಾಡು ಕೊಡುವುದಷ್ಟೇ ಇವರ ಕೆಲಸ ಎನ್ನುವ ಕಾರಣಕ್ಕೆ ಸಾಮಾನ್ಯ ಆಟಗಾರರನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈ ಸಲ ಮಾತ್ರ ಹಾಗಾಗಲಿಲ್ಲ. ಉತ್ತಮ ಬ್ಯಾಕಪ್ ನೀಡಲಾಯ್ತು. ಗಾಯಾಳುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿದ್ರು ಅವರಿಗೆ ಪರ್ಯಾಯವಾಗಿ ಬಂದ ಒಬ್ಬೊಬ್ಬ ಆಟಗಾರ ಕೂಡ ಸಮರ್ಥರಾಗಿದ್ದರು ಆಸೀಸ್ ಲೆಕ್ಕಾಚಾರ ತಲೆಕೆಳಗೆ ಮಾಡುವಲ್ಲಿ ಯುವ ಪಡೆ ಕಾರಣವಾಯಿತು.
ಸಮರ್ಥ ಯುವಪಡೆಗೆ ಮಣೆ ಹಾಕಿದ ಸುನಿಲ್ ಜೋಶಿ:ಯುವ ಪಡೆಯ ಅಬ್ಬರದ ಆಟದಿಂದಾಗಿ ಟೆಸ್ಟ್ ಸರಣಿ ಗೆದ್ದಿರಬಹುದು. ಇಂತಹ ವಜ್ರಗಳನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಆಗಿನ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಸುನಿಲ್ ಜೋಶಿ. ಕರ್ನಾಟಕದ ಕ್ಲಾಸ್ ಲೆಫ್ಟ್ ಆರ್ಮ್ ಆಪ್ ಸ್ಪಿನ್ನರ್ ಆಗಿರುವ ಜೋಶಿ. ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಮೊದಲಿನಿಂದಲು ಎತ್ತಿದ ಕೈ. ಆಯ್ಕೆ ಸಮಿತಿಯವರ ದೂರದೃಷ್ಟಿ, ಸಮಿತಿಯ ಮುಖ್ಯಸ್ಥ ಜೋಶಿಯವರ ಅನುಭವ, ಯುವ ಪ್ರತಿಭೆಗಳಿಗೆ ಮಣೆ ಹಾಕಿದ ರೀತಿ ನಿಜಕ್ಕೂ ಶ್ಲಾಘನೀಯ. ಆಸೀಸ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಆಯ್ಕೆ ಮಾಡಿ ಕಳಿಸುವ ಮೂಲಕ ಯಂಗ್ ಇಂಡಿಯಾ ಉತ್ತಮ ಫಲಿತಾಂಶ ನೀಡುವಲ್ಲಿ ಮಹತ್ವದ ಪಾತ್ರವಹಿಸಿದ್ರು. ಎಷ್ಟೇ ಆಟಗಾರರು ಗಾಯಗೊಂಡ್ರೂ ಅವರ ಬ್ಯಾಕಪ್ ಆಟಗಾರರು ಅಷ್ಟೇ ಸಮರ್ಥರಾಗಿರಬೇಕು ಮತ್ತು ತಂಡದ ಸಮತೋಲನ ಕಾಪಾಡಿಕೊಂಡು ಹೋಗುವಂತ ಆಟಗಾರರನ್ನು ಭಾರತಕ್ಕೆ ನೀಡಿದ್ರು. ನೆಟ್ ಬೌಲರ್ ಆಗಿ ಆಯ್ಕೆಯಾದಂತಹ ನಟರಾಜನ್ ಕೂಡ ಭಾರತದ ಗೆಲುವಿನಲ್ಲಿ ಅಳಿಲು ಸೇವೆ ಸಲ್ಲಿಸಲು ಯಶಸ್ವಿಯಾಗಿದ್ದು ಜೋಶಿಯವರ ದೂರದೃಷ್ಟಿಯಿಂದಾಗಿ.
ಸವಾಲಿನಿಂದ ಕೂಡಿತ್ತು ಟೀಂ ಇಂಡಿಯಾ ಆಯ್ಕೆ:ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವುದು ಆಯ್ಕೆಗಾರರಿಗೆ ಸವಾಲಿನಿಂದ ಕೂಡಿತ್ತು. ಒಂದೆಡೆ ಕೋವಿಡ್ ಮಹಾಮಾರಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕ್ವಾರಂಟೈನ್ ನಿಯಮ ಕಡ್ಡಾಯವಾದ ಕಾರಣ ಆಯ್ಕೆಗಾರರಿಗೆ ತಂಡ ಆಯ್ಕೆ ಮಾಡುವುದು ತಲೆನೋವಾಗಿ ಪರಿಣಮಿಸಿತು. ಯಾವುದೇ ಕಾರಣಕ್ಕೂ ಟೀಂ ಇಂಡಿಯಾಗೆ ಸರಣಿ ಮಧ್ಯದಲ್ಲಿ ತೊಂದರೆಯಾಗಬರದು ಎಂಬುದನ್ನು ಅರಿತ ಜೋಶಿಯವರು 18 ಜನರ ತಂಡವನ್ನು ಟೆಸ್ಟ್ಗೆ ಆಯ್ಕೆ ಮಾಡಿದರು. ಪ್ರತಿಯೊಬ್ಬ ಆಟಗಾರನ ಪ್ರದರ್ಶನವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಆಸೀಸ್ ನೆಲದಲ್ಲಿ ಅಬ್ಬರಿಸುವಂತ ಆಟಗಾರರನ್ನು ಸೆಲೆಕ್ಟ್ ಮಾಡಿದರು. ಬೌಲರ್ ಹೆಚ್ಚು ಗಾಯಗೊಳ್ಳುವ ಸಾಧ್ಯತೆಯಿದ್ದ ಕಾರಣ ಹೆಚ್ಚು ಬೌಲರ್, ಆಲ್ರೌಂಡರ್ಗಳನ್ನು ಆಯ್ಕೆ ಮಾಡಿದ್ರು. ಒಬ್ಬ ಹೆಚ್ಚುವರಿ ವಿಕೆಟ್ ಕೀಪರ್ ಕೂಡ ಕಳುಹಿಸಿದರು. ಈ ಸಲ ಸರಣಿಯಲ್ಲಿ ಐದು ಜನ ಆರಂಭಿಕ ಬ್ಯಾಟ್ಸಮನ್ಗಳು ತಂಡದಲ್ಲಿ ಸ್ಥಾನಪಡೆದಿದ್ದು ಸಹ ಈ ಕಾರಣಕ್ಕಾಗಿ. ಭಾರತ ತಂಡ ಐತಿಹಾಸಿಕ ಗೆಲುವಿನ ನಂತರ ಆಟಗಾರರು, ಕೋಚ್ಗಳು ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ, ಅವರು ಪಾತ್ರಕ್ಕೆ ಅರ್ಹರು ಕೂಡ. ಈ ಗೆಲುವಿನಲ್ಲಿ ಯುವ ಆಟಗಾರರಿಗೆ ಅವಕಾಶ ಕೊಟ್ಟ ಸುನಿಲ್ ಜೋಶಿ ಬಳಗದ ಪಾತ್ರ ಕೂಡ ಮಹತ್ವದ್ದು.
ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಯುವಪಡೆ:ಕಾಂಗರೂ ನಾಡಲ್ಲಿ ಮಿಂಚಿದ ಎಲ್ಲ ಯುವ ಪ್ರತಿಭೆಗಳ ಗುರು ಟೆಸ್ಟ್ ಕ್ರಿಕೆಟ್ನ ಮಾಂತ್ರಿಕ ರಾಹುಲ್ ದ್ರಾವಿಡ್. ಟೀಂ ಇಂಡಿಯಾ ಕೋಚ್ ಆಗುವ ಅವಕಾಶ ಸಿಕ್ಕರೂ ಅದನ್ನು ನಯವಾಗಿ ತೀರಸ್ಕರಿಸಿ. ಟೀಂ ಇಂಡಿಯಾಗೆ ಆಯ್ಕೆಯಾಗುವಂತಹ ಯುವಕರು ಸದೃಡ ಸಮರ್ಥರಾಗಿರಬೇಕು ಅಂತಹ ಯುವಕರನ್ನು ತರಬೇತಿ ಮಾಡುವುದಾಗಿ ತಿಳಿಸಿ ಅಂಡರ್-19, ಭಾರತ ಎ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಿದ ದ್ರಾವಿಡ್, ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿದರು. ರಾಹುಲ್ ಅಂಡರ್-19 ಕೋಚ್ ಆದಗಿನಿಂದಲು ಭಾರತ ತಂಡ ಮೂರು ಸಲ ಅಂಡರ್-19 ವಿಶ್ವಕಪ್ ಫೈನಲ್ ತಲುಪಿದೆ. ಒಂದು ಸಲ ಚಾಂಪಿಯನ್ ಆಗಿದೆ. ಸದ್ಯ ಟೀಮ್ ಇಂಡಿಯಾದಲ್ಲಿ ಮಿಂಚಿದ ಪ್ರತಿ ಯುವ ಆಟಗಾರ ಕೂಡ ದ್ರಾವಿಡ್ ಗರಡಿಯಲ್ಲಿ ಪಳಗಿದವರು.. ಶುಭ್ಮನ್ ಗಿಲ್, ರಿಶಭ್ ಪಂತ್, ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಮೊಹ್ಮದ್ ಸಿರಾಜ್, ಮಯಾಂಕ್ ಅಗರ್ವಾಲ್ ಈ ಎಲ್ಲ ಆಟಗಾರರು ದ್ರಾವಿಡ್ ಸ್ಕೂಲ್ನಿಂದ ಬಂದವರು..
ರಹಾನೆ-ಪೂಜಾರ ಹಿಂದಿನ ಶಕ್ತಿ ದ್ರಾವಿಡ್:ರಾಹುಲ್ ದ್ರಾವಿಡ್ ಶಾಲೆಯ ಉತ್ತಮ ವಿದ್ಯಾರ್ಥಿ ಅಜಿಂಕ್ಯ ರಹಾನೆ. ಐಪಿಎಲ್ ನಿಂದಲೂ ರಾಹುಲ್ ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತ ಅವರ ಆಟವನ್ನು ನೋಡುತ್ತ ತಮ್ಮ ಆಟವನ್ನು ಮತ್ತಷ್ಟು ಸುಧಾರಿಕೊಂಡವರು ರಹಾನೆ. ದ್ರಾವಿಡ್ ಅವರ ಅನೇಕ ಗುಣಗಳನ್ನು ರಹಾನೆಯಲ್ಲಿ ಕಾಣಬಹುದು.ದ್ರಾವಿಡ್ರಿಂದ ಹಲವು ಟೆಕ್ನಿಕ್ ಕಲಿತಿರುವ ರಹಾನೆ, ಜ್ಯಾಮಿ ನಾಯಕತ್ವದಲ್ಲಾಡುವ ಮೂಲಕ, ಅವರ ಕೆಲ ಗುಣಗಳನ್ನು ಅಳವಡಿಸಿಕೊಂಡಿದ್ದಾರೆ. ರಹಾನೆ ನಾಯಕತ್ವದಲ್ಲು ಸಂಪೂರ್ಣ ಪರಿಪಕ್ವತೆಯನ್ನು ಕಾಣಬಹುದು ತಮ್ಮ ಆಟದಲ್ಲಿ ಏನಾದರು ಸ್ವಲ್ಪ ಸಮಸ್ಯೆಯಾದರೆ ರಾಹುಲ್ ಅವರ ಮೊರೆ ಹೋಗುವ ಜಿಂಕ್ಸ್, ಪ್ರತಿ ಪಂದ್ಯದಲ್ಲೂ ಮೊದಲಿಗಿಂತ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಆಟ ಸುಧಾರಿಸಿಕೊಂಡಿದ್ದಾರೆ. ತಾವು ಆಡುವುದರೊಂದಿಗೆ ಬೇರೆಯವರಿಗು ಆಡುವಂತೆ ಪ್ರೇರಿಪಿಸುವ ಅವರು ತಂಡವನ್ನು ತಮ್ಮೊಂದಿಗೆ ಹಿಡಿಡುಕೊಂಡು ಹೋಗುವ ಗುಣ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರ ಚೇತೇಶ್ವರ್ ಪೂಜಾರ. ದ್ರಾವಿಡ್ ಅವರಂತಾಗಬೇಕೆಂದು ಬ್ಯಾಟ್ ಹಿಡಿದ ಪೂಜಾರ ಅವರ ಯಶಸ್ಸಿನ ಸಿಕ್ರೇಟ್ ಸಹ ರಾಹುಲ್. ಸದಾ ಪೂಜಾರ ಅವರನ್ನು ಬೆನ್ನು ತಟ್ಟಿ ಹುರಿದುಂಬಿಸುವ ವಾಲ್, ಬ್ಯಾಟಿಂಗ್ನಲ್ಲಿ ಅವರು ಯಾವುದೇ ಸಮಸ್ಯೆಗೆ ಒಳಗಾದರೆ ಸೂಕ್ತ ಸಲಹೆ ನೀಡುವ ಮೂಲಕ ಪೂಜಾರ್ಗೆ ಸಹಾಯ ಮಾಡುತ್ತಾರೆ. ಸಮಸ್ಯೆಯಿಂದ ಹೊರಬರುವಂತೆ ಉಪಯುಕ್ತ ಸಲಹೆ ನೀಡುತ್ತಾರೆ. ಪೂಜಾರ ತಾಂತ್ರಿಕವಾಗಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ತನಕ ರಾಹುಲ್ ಅವರನ್ನು ಗೈಡ್ ಮಾಡುತ್ತಾರೆ. ಭಾರತ ತಂಡ ಇಂದು ವಿಶ್ವಮಟ್ಟದಲ್ಲಿ ಮಿಂಚಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ರಾಹುಲ್ ದ್ರಾವಿಡ್. ಬಲಿಷ್ಠ ಟೀಂ ಪೈನ್ ಪಡೆಯನ್ನು ಆಸೀಸ್ ನೆಲದಲ್ಲಿ ಮಣಿಸುವ ಮೂಲಕ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂಬರ್ವನ್ ಸ್ಥಾನಕ್ಕೇರಿರುವ ಭಾರತ ಹಿಂದಿನ ಶಕ್ತಿ ದಿ ವಾಲ್. ಅಂಡರ್-19 ತಂಡದಲ್ಲಿ ಉತ್ತಮ ಕೋಚಿಂಗ್ ನೀಡುತ್ತಿರುವ ರಾಹುಲ್ ಭಾರತ ತಂಡಕ್ಕೆ ಸಮರ್ಥ ಆಟಗಾರರನ್ನು ಪೂರೈಸುವಲ್ಲಿ ಸಫಲರಾಗಿದ್ದಾರೆ. ಹಾಗಾಗಿ ಇಂದು ಟೀಂ ಇಂಡಿಯಾ ಆಯ್ಕೆ ಮಾಡುವುದು ಸಹ ಆಯ್ಕೆಗಾರರಿಗೆ ಸುಲಭವಾಗಿದೆ. ಯಾವ ಆಟಗಾರ ಯಾವ ದೇಶದಲ್ಲಿ ಎಂತಹ ಪರಿಸ್ಥಿತಿಯಲ್ಲಿ ಪುಟಿದೇಳಬಲ್ಲ ಎಂಬ ಮಾಹಿತಿ ದ್ರಾವಿಡ್ಗಿದೆ. ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕರಾಗಿರುವ ರಾಹುಲ್ ದ್ರಾವಿಡ್ ಪ್ರತಿ ಆಟಗಾರರ ಚಲನವಲನ ಗಮನಿಸುತ್ತಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಅಂಡರ್-19 ಮತ್ತು ಭಾರತ ಎ ತಂಡದಿಂದ ಉತ್ತಮ ಯುವ ಕ್ರಿಕೆಟಿಗರು ಭಾರತ ತಂಡದ ಕದ ತಟ್ಟುತ್ತಿದ್ದು, ಇಂದು ಭಾರತ ಬಲಿಷ್ಠ ಬೆಂಚ್ ಸ್ಟ್ರೆಂಥ್ ಹೊಂದಿದೆ.