ದಿಂಡಿಗಲ್: ತಮಿಳುನಾಡು ವಿರುದ್ಧ ರಣಜಿ ಪಂದ್ಯದ ಕೊನೆಯ ದಿನ, ಕೊನೆಯ ಓವರ್ನಲ್ಲಿ ವಿಕೆಟ್ ಪಡೆಯುವ ಮೂಲಕ ಡ್ರಾನಲ್ಲಿ ಅಂತ್ಯಗೊಳ್ಳುತ್ತಿದ್ದ ಪಂದ್ಯವನ್ನು 26 ರನ್ಗಳಿಂದ ಗೆದ್ದು ಬೀಗಿದೆ.
ಈಗಾಗಲೆ ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳುನಾಡನ್ನು ಬಗ್ಗುಬಡಿದಿದ್ದ ಕನ್ನಡಿಗರು ರಣಜಿಯ ಮೊದಲ ಪಂದ್ಯದಲ್ಲೆ 26 ರನ್ಗಳ ರೋಚಕ ಜಯದೊಂದಿಗೆ ಶುಭಾರಂಭ ಮಾಡಿದೆ.
ಘಟಾನುಘಟಿಗಳ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯಕ್ಕೆ ಕಣಕ್ಕಿಳಿದಿದ್ದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 336 ರನ್ಗಳಿಸಿತ್ತು ಇದಕ್ಕುತ್ತರವಾಗಿ ತಮಿಳುನಾಡು ತಂಡ 307 ರನ್ಗಳಿಸಿತ್ತು. 29 ರನ್ಗಳ ಮುನ್ನಡೆಯೊಂದಿಗೆ ಕಣಕ್ಕಿಳಿದಿದ್ದ ಕರ್ನಾಟಕ 151 ರನ್ಗಳಿಗೆ ಆಲೌಟ್ ಆಗಿ ಸಂಕಷ್ಟ ಅನುಭವಿಸಿತ್ತು.
181 ರನ್ಗಳ ಗುರಿ ಪಡೆದಿದ್ದ ತಮಿಳುನಾಡು ತಂಡ ಮೊದಲ 7 ಓವರ್ಗಳಲ್ಲಿ 46 ರನ್ಗಳಿಸಿ ಸುಲಭ ಜಯ ಸಾಧಿಸುವ ಮುನ್ಸೂಚನೆ ನೀಡಿತ್ತು. ಆದರೆ ಇದಕ್ಕೆ ಅವಕಾಶ ನೀಡದ ಕರ್ನಾಟಕ ಬೌಲರ್ಗಳು ತಮಿಳುನಾಡಿಗೆ ಡ್ರಾ ಸಾಧಿಸಲು ಅವಕಾಶ ಕೊಡದೆ ಪಂದ್ಯವನ್ನು ಗೆದ್ದು ಬೀಗಿದೆ. ಕೆ.ಗೌತಮ್ ದಾಳಿಗೆ ತತ್ತರಿಸಿದ ತಮಿಳುನಾಡು 154 ರನ್ಗಳಿಗೆ ಆಲೌಟ್ ಆಗಿ ಸೋಲುಕಂಡಿತು. 42 ರನ್ಗಳಿಸಿದ ಅಭಿನವ್ ಮುಕುಂದ್ ತಮಿಳುನಾಡಿನ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಸಯ್ಯದ್ ಮುಷ್ತಾಕ್ ಅಲಿಯಲ್ಲಿ ಕೊನೆಯ ಓವರ್ ಎಸೆದಿದ್ದ ಕೆ ಗೌತಮ್ ಮತ್ತೊಮ್ಮೆ ಕೊನೆಯ ಓವರ್ ಸರ್ಕಸ್ನಲ್ಲಿ ತಮಿಳುನಾಡಿನ ಕೊನೆಯ ವಿಕೆಟ್ ಪಡೆದು ಕರ್ನಾಟಕಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅಲ್ಲದೆ ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದಿದ್ದ ಅವರು ಎರಡನೇ ಇನ್ನಿಂಗ್ಸ್ನಲ್ಲಿ 8 ವಿಕೆಟ್ ಪಡೆದು ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಪಂದ್ಯದ ಗೆಲುವಿನೊಂದಿಗೆ ಕರ್ನಾಟಕ ತಂಡ 6 ಅಂಕ ಪಡೆಯಿತು.
ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ಹುಬ್ಬಳ್ಳಿಯಲ್ಲಿ ಡಿಸೆಂಬರ್ 17ರಿಂದ ಉತ್ತರ ಪ್ರದೇಶದ ವಿರುದ್ಧ ಕಣಕ್ಕಿಳಿಯಲಿದೆ.