ಸಿಡ್ನಿ: ಮೂರನೇ ಟೆಸ್ಟ್ ಪಂದ್ಯದ ವೇಳೆ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೊಳಗಾಗಿರುವುದು ಅತ್ಯಂತ ಅಪಮಾನಕರ ಘಟನೆ ಮತ್ತು ವೈಯಕ್ತಿಕವಾಗಿ ತಮಗೆ ಹೆಚ್ಚು ಕಿರಿಕಿರಿಯನ್ನುಂಟು ಮಾಡಿದೆ ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರನೇ ದಿನ ಸಿರಾಜ್ ಹಾಗೂ ಬುಮ್ರಾರನ್ನು ಕೆಲವು ಪ್ರೇಕ್ಷಕರು ಕುಡಿದ ಮತ್ತಿನಲ್ಲಿದ್ದ ವೈಯಕ್ತಿಕವಾಗಿ ನಿಂದಿಸಿದರೆಂದು ಪಂದ್ಯದ ಅಧಿಕಾರಿಗಳಿಗೆ ಬಿಸಿಸಿಐ ದೂರು ನೀಡಿತ್ತು. ಆದರೆ, ನಾಲ್ಕನೇ ದಿನವೂ ಈ ಘಟನೆ ಮರುಕಳಿಸಿದ್ದರಿಂದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ 6 ಮಂದಿಯನ್ನು ಮೈದಾನದಿಂದ ಹೊರ ಹಾಕಿದ್ದರು.
ಈ ಕುರಿತು ಪಂದ್ಯದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಜಸ್ಟಿನ್ ಲ್ಯಾಂಗರ್, ಶನಿವಾರ ಮತ್ತು ಭಾನುವಾರದ ಜನಾಂಗೀಯ ನಿಂದನೆ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
"ಕ್ಷಮಿಸಿ, ಈ ಘಟನೆ ನನಗೆ ಅಸಮಾಧಾನ ಮತ್ತು ನಿರಾಶೆ ತರಿಸಿದೆ. ಇದೊಂದು ನನ್ನ ಜೀವನದಲ್ಲಿ ಅತ್ಯಂತ ಹೆಚ್ಚು ಕಾಡುವ ಘಟನೆಯಾಗಿದೆ. ಆ ಜನರು ತಾವು ಕ್ರಿಕೆಟ್ ಅಥವಾ ಬೇರೆ ಯಾವುದೇ ಕ್ರೀಡೆಗಳನ್ನು ನೋಡಲು ಬಂದು, ಹಣ ನೀಡಿರುವುದಕ್ಕಾಗಿ ಆಟಗಾರರನ್ನು ನಿಂದಿಸಬಹುದು ಅಥವಾ ತಮಿಗಿಷ್ಟ ಬಂದಹಾಗೆ ನಡೆದುಕೊಳ್ಳಬಹುದು ಎಂಬ ಆಲೋಚನೆ ಹೊಂದಿದ್ದಾರೆ ಅನ್ನಿಸುತ್ತಿದೆ.
ಇದನ್ನು ನಾನು ಒಬ್ಬ ಆಟಗಾರನಾಗಿ, ಒಬ್ಬಕೋಚ್ ಆಗಿ ಧ್ವೇಷಿಸುತ್ತೇನೆ. ಈ ರೀತಿ ಘಟನೆ ವಿಶ್ವದಾದ್ಯಂತ ನಡೆಯುತ್ತಿರಬಹುದು. ಆದರೆ, ಆಸ್ಟ್ರೇಲಿಯಾದಲ್ಲಿ ನಡೆದಿರುವುದಕ್ಕೆ ನನಗೆ ತುಂಬಾ ದುಃಖವಾಗುತ್ತಿದೆ ಎಂದು ಲ್ಯಾಂಗರ್ ಹೇಳಿದ್ದಾರೆ.
"ನಮ್ಮ ಸರಣಿ ಇಲ್ಲಿಯವರೆಗೆ ಮಹಾನ್ ಉತ್ಸಾಹದಿಂದ ನಡಯುತ್ತಿದೆ ಎಂದು ನಾನು ಭಾವಿಸುತ್ತೇನೆ, ಎರಡು ತಂಡಗಳ ನಡುವೆ ಇದು ನಂಬಲಾಗದ ಕ್ರಿಕೆಟ್ ಆಗಿದೆ. ಇಂತಹ ಪಂದ್ಯಗಳನ್ನು ಮೈದಾನದಲ್ಲಿ ನೋಡುವುದು ಅದ್ಭುತವಾಗಿದೆ.
ಆದರೆ, ಇಂತಹ ಕ್ರೀಡಾಸ್ಫೂರ್ತಿಯ ನಡುವೆ ನಡೆಯುತ್ತಿರುವ ಸರಣಿಯಲ್ಲಿ ಈ ಘಟನೆಗಳ ಬಗ್ಗೆ ಕಳೆದ ರಾತ್ರಿ ಮತ್ತು ನಾವು ನೋಡುತ್ತಿರುವುದು ನಾಚಿಕೆಗೇಡಿನ ಸಂಗತಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಹಿಂದೆಯೂ ಸಿಡ್ನಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಅನುಭವಿಸಿದ್ದೇವೆ: ರವಿಚಂದ್ರನ್ ಅಶ್ವಿನ್