ನವದೆಹಲಿ : ಆಸ್ಟ್ರೇಲಿಯಾ ವಿರುದ್ಧ ಸರಣಿಯ ವೇಳೆ ರವಿಶಾಸ್ತ್ರಿ ಅವರ ಸ್ಪೂರ್ತಿದಾಯಕ ಕಥೆಗಳ ಯುವ ಕ್ರಿಕೆಟರ್ಗೆ ವಾಷಿಂಗ್ಟನ್ ಸುಂದರ್ಗೆ ಟಾನಿಕ್ನಂತೆ ಕಾರ್ಯನಿರ್ವಹಿಸಿದ್ದು, ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಭಾರತ ತಂಡದ ಪರ ತಮ್ಮ ಕೋಚ್ನಂತೆಯೇ ಆರಂಭಿಕನಾಗಿ ಕಣಕ್ಕಿಳಿಯುವ ಸವಾಲಿಗೂ ಸಿದ್ಧರಿರುವುದಾಗಿ ತಮಿಳುನಾಡು ಕ್ರಿಕೆಟಿಗ ತಿಳಿಸಿದ್ದಾರೆ.
21 ವರ್ಷದ ವಾಷಿಂಗ್ಟನ್ ಸುಂದರ್ ಅಂಡರ್-19 ತಂಡದಲ್ಲಿ ಆಡುತ್ತಿದ್ದ ದಿನಗಳಲ್ಲಿ ಸ್ಪೆಷಲಿಸ್ಟ್ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದರು. ನಂತರ ಆಫ್ ಸ್ಪಿನ್ನಲ್ಲಿ ಉತ್ತಮ ಕೌಶಲ್ಯ ಪ್ರದರ್ಶಿಸಿ ರಾಷ್ಟ್ರೀಯ ಟಿ20 ತಂಡದಲ್ಲಿ ಅವಕಾಶ ಪಡೆದಿದ್ದರು.
ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯದ ವಿಜಯದಲ್ಲಿ ಸುಂದರ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮುಂಚೆ ಕೋಚ್ ರವಿಶಾಸ್ತ್ರಿ ಹೇಗೆ ತಮ್ಮ ಮೇಲೆ ಪ್ರಭಾವ ಬೀರಿದ್ದರು ಎಂದು ಸುಂದರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
"ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕಾಗಿ ಆರಂಭಿಕನಾಗಿ ಕಣಕ್ಕಿಳಿಯುವುದಕ್ಕೆ ಅವಕಾಶ ಸಿಕ್ಕರೆ ಅದು ನನಗೆ ಆಶೀರ್ವಾದ ಎಂದು ನಾನು ಭಾವಿಸುತ್ತೇನೆ. ನಮ್ಮ ಕೋಚ್ ರವಿಶಾಸ್ತ್ರಿ ಅವರು ಆಡುತ್ತಿದ್ದ ದಿನಗಳಲ್ಲಿ ಈ ಸವಾಲನ್ನು ಸ್ವೀಕರಿಸಿದಂತೆ, ನಾನೂ ಕೂಡ ಅಳವಡಿಸಿಕೊಳ್ಳಲು ಬಯಸುತ್ತೇನೆ" ಎಂದು ಚೆನ್ನೈನ ತಮ್ಮ ನಿವಾಸದಲ್ಲಿ ನಡೆದ ಮಾತುಕತೆಯಲ್ಲಿ ಹೇಳಿಕೊಂಡಿದ್ದಾರೆ.
"ರವಿ ಸರ್ ನಮಗೆ ಅವರು ಆಡುತ್ತಿದ್ದ ಕಾಲದ ಕೆಲವು ಸ್ಫೂರ್ತಿದಾಯಕ ಕಥೆಗಳನ್ನು ಹೇಳುತ್ತಿದ್ದರು. ಅವರು ನ್ಯೂಜಿಲ್ಯಾಂಡ್ ವಿರುದ್ಧ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಪದಾರ್ಪಣೆ ಮಾಡಿ 4 ವಿಕೆಟ್ ಪಡೆದಿದ್ದರು. ನಂತರ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ಆದರೆ, ಅವರು ನಂತರದ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಆರಂಭಿಕ ಬ್ಯಾಟ್ಸ್ಮನ್ ಆಗಿ ಬದಲಾಗಿ ಅತ್ಯುತ್ತಮ ಬೌಲರ್ಗಳನ್ನು ಎದುರಿಸಿದ್ದರು. ನಾನು ಕೂಡ ಅವರಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಮಾಡುವುದನ್ನು ಇಷ್ಟಪಡುತ್ತೇನೆ" ಎಂದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ 32ರ ಸರಾಸರಿಯಲ್ಲಿ ರನ್ಗಳಿಸಿರುವ ಸುಂದರ್ ತಿಳಿಸಿದ್ದಾರೆ.
ವಾಷಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕೇವಲ ನೆಟ್ ಬೌಲರ್ ಆಗಿ ಕಣಕ್ಕಿಳಿದಿದ್ದರು. ನಂತರ ತಂಡದಲ್ಲಿ ಕೆಲವು ಬೌಲರ್ಗಳು ಗಾಯಕ್ಕೊಳಗಾದರಿಂದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಬೌಲಿಂಗ್ನಲ್ಲಿ 3 ವಿಕೆಟ್ ಪಡೆದಿದ್ದ ಅವರು ಮೊದಲ ಇನ್ನಿಂಗ್ಸ್ನಲ್ಲಿ ತಂಡ ಆಪತ್ತಿನಲ್ಲಿದ್ದ ಸಂದರ್ಭದಲ್ಲಿ ಶಾರ್ದುಲ್ ಠಾಕೂರ್ ಜೊತೆಗೆ ಶತಕದ ಜೊತೆಯಾಟ ನಡೆಸಿದರಲ್ಲದೆ, ಅವರೂ ಕೂಡ 62 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದ್ದರು. 2ನೇ ಇನ್ನಿಂಗ್ಸ್ನಲ್ಲೂ ತ್ವರಿತ 22 ರನ್ಗಳಿಸಿ ಗಬ್ಬಾ ಗೆಲುವಿನಲ್ಲಿ ಪ್ರಮುಖ ಭಾಗವಾಗಿದ್ದರು.
ಇದನ್ನು ಓದಿ : ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಪ್ರೇಕ್ಷಕರನ್ನು ಮರಳಿ ಕರೆತರಲು ಬಿಸಿಸಿಐ ಉತ್ಸುಕ