ಬೆಂಗಳೂರು: ಸ್ನಾಯು ಸೆಳೆತಕ್ಕೊಳಗಾಗಿ ಐಪಿಎಲ್ನಿಂದ ಹೊರ ಬಿದ್ದಿರುವ ವೇಗದ ಬೌಲರ್ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 17ರಿಂದ ಆರಂಭವಾಗಲಿದೆ, ಆದರೆ, ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅಧಿಕೃತವಾಗಿಲ್ಲ. ಅದಾಗ್ಯೂ ಆರಂಭದ ಪಂದ್ಯದಿಂದಲೇ ಇಶಾಂತ್ ಶರ್ಮಾ ಕಣಕ್ಕಿಳಿಯಲಿದ್ದಾರೆ ಎಂದು ಎನ್ಸಿಎ ಮೂಲಗಳಿಂದ ತಿಳಿದು ಬಂದಿದೆ.
ಮಂಚೂಣಿ ಕ್ರಿಕೆಟ್ ವೆಬ್ಸೈಟ್ ಪ್ರಕಾರ, ಮಾಜಿ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಮುಖ್ಯಸ್ಥರಾಗಿರುವ ಎನ್ಸಿಎ ಬಿಸಿಸಿಐಗೆ ಪತ್ರ ಬರೆದಿದ್ದು, ಇದರಲ್ಲಿ ಇಶಾಂತ್ ಶರ್ಮಾ ಫಿಟ್ ಆಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಬೌಲಿಂಗ್ ಮಾಡುವ ನಿರೀಕ್ಷೆಯಲ್ಲಿದ್ದಾರೆ ಎಂದು ವಿವರಿಸಿದೆ ಎಂದು ತಿಳಿದು ಬಂದಿದೆ.
ಡೆಲ್ಲಿ ತಂಡದಿಂದ ಗಾಯಗೊಂಡು ಇಶಾಂತ್ ಹೊರಬಿದ್ದ ಬೆನ್ನಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದರು.
ಎನ್ಸಿಎ ಅದೇ ಪತ್ರದಲ್ಲಿ ಇಶಾಂತ್ ಶರ್ಮಾ ಸಂಪೂರ್ಣ ಟೆಸ್ಟ್ ಆಡಲು ಸಮರ್ಥರಿದ್ದಾರೆಯೇ ಎಂದು ಖಚಿತಗೊಳಿಸಿಕೊಳ್ಳಲು ಕಡಿಮೆಯಂದರೂ ಒಂದು ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡಬೇಕಾಗಿದೆ ಎಂದು ತಿಳಿಸಿದೆ.
ಇಶಾಂತ್ ಶರ್ಮಾ ಭಾರತ ತಂಡದ ಪರ 97 ಟೆಸ್ಟ್ ಪಂದ್ಯಗಳನ್ನಾಡಿದ್ದು, 297 ವಿಕೆಟ್ ಪಡೆದಿದ್ದಾರೆ. ಬಲಗೈ ವೇಗದ ಬೌಲರ್ ಈ ಸರಣಿಯಲ್ಲಿ 300 ಟೆಸ್ಟ್ ವಿಕೆಟ್‌ಗಳನ್ನು ಪಡೆಯಲು ಎದುರು ನೋಡುತ್ತಿದ್ದಾರೆ. ಭಾರತದ ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಟಿ -20, 3 ಏಕದಿನ ಮತ್ತು 4 ಟೆಸ್ಟ್ ಪಂದ್ಯಗಳನ್ನಾಡಲಿದೆ.