ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಂದು ನಿಗದಿಯಂತೆ ಆರಂಭವಾಗಲಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ನ ಇಬ್ಬರು ಆಟಗಾರರು ಸೇರಿದಂತೆ 13 ಸಿಬ್ಬಂದಿಗಳಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಈ ವರದಿಯ ನಂತರ 2020ರ ಐಪಿಎಲ್ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಯುಎಇನಲ್ಲಿ ಕೋವಿಡ್ 19 ಏರಿಕೆಯಾಗುತ್ತಿರುವುದರಿಂದ ಟೂರ್ನಿಯನ್ನು ಮುಂದೂಡಬಹುದು ಎಂಬ ಊಹಾಪೋಹಗಳು ಕೂಡ ಕೇಳಿಬಂದಿದ್ದವು.
ಆದರೆ ಇದನ್ನೆಲ್ಲಾ ತಳ್ಳಿಯಾಕಿರುವ ಧುಮಾಲ್ ಯುಎಇನಲ್ಲಿ ಎಲ್ಲವೂ ಸರಿಯಾಗಿದೆ. ಟೂರ್ನಮೆಂಟ್ ಯೋಜನೆಯಂತೆ ನಡೆಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
" ಅವರೆಲ್ಲರೂ [ಸಿಎಸ್ಕೆ ಸದಸ್ಯರು] ಈಗ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಮತ್ತು ಐಪಿಎಲ್ ನಿಗದಿಯಂತೆ ನಡೆಯುತ್ತದೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಚಿಂತಿಸಬೇಡಿ, ಎಲ್ಲಾ ತಂಡದ ಆಟಗಾರರು ಕೋವಿಡ್19 ಪ್ರೋಟೋಕಾಲ್ಗಳನ್ನು ಅನುಸರಿಸುತ್ತಿದ್ದಾರೆ. ಟೂರ್ನಿಯಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ಆಡಿಸಲಾಗುತ್ತದೆ. ಆದ್ದರಿಂದ ಅಲ್ಲಿ ಯಾವುದೇ ಸಮಸ್ಯೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ" ಎಂದು ಧುಮಾಲ್ ಹೇಳಿದ್ದಾರೆ.
ವೇಳಾಪಟ್ಟಿಯ ಬಗ್ಗೆ ಕೇಳಿದ್ದಕ್ಕೆ, ಬಿಸಿಸಿಐ ಇಸಿಬಿಯೊಂದಿಗೆ ಚರ್ಚೆ ನಡೆಸುತ್ತಿದೆ. ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು. ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಕೂಡ ಯುಎಇನಲ್ಲಿದ್ದು, ವೇಳಾಪಟ್ಟಿಯ ಸಿದ್ದತೆಯ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ನಮಗೆ ಇಸಿಬಿ ಎಲ್ಲಾ ರೀತಿಯಿಂದಲೂ ಬೆಂಬಲ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.