ನವದೆಹಲಿ: 2020ರ ಐಪಿಎಲ್ ಟೂರ್ನಿಯನ್ನು ನಡೆಸಲು ನಾವು ಸಿದ್ಧರಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ನಾವು ಸೆಪ್ಟೆಂಬರ್-ಅಕ್ಟೋಬರ್ ಸಮಯದಲ್ಲಿ ಐಪಿಎಲ್ ನಡೆಸಲು ಎಲ್ಲಾ ರೀತಿಯ ಯೋಜನೆ ಸಿದ್ಧಪಡಿಸಿದ್ದೇವೆ. ಈ ವೇಳೆ ವೈದ್ಯಕೀಯ ಮತ್ತು ಇತರ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ ಎಂದು ಪಟೇಲ್ ತಿಳಿಸಿದ್ದಾರೆ.
ಮೈದಾನಕ್ಕೆ ಪ್ರೇಕ್ಷಕರು ಆಗಮಿಸಲು ಅವಕಾಶ ಇರುತ್ತದೆಯೋ ಇಲ್ಲವೋ ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಆ ಸಮಯದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂದು ನೋಡಬೇಕಾಗಿದೆ. ಆದರೆ ಪ್ರೇಕ್ಷಕರಿದ್ದರೂ, ಇಲ್ಲದಿದ್ದರೂ ಟೂರ್ನಿ ನಡೆಸಲು ನಾವು ಸಿದ್ಧರಿದ್ದೇವೆ. ಟಿ-20 ವಿಶ್ವಕಪ್ ಟೂರ್ನಿ ಬಗ್ಗೆ ಐಸಿಸಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಐಪಿಎಲ್ ಭವಿಷ್ಯ ನಿರ್ಧಾರವಾಗಲಿದೆ ಎಂದಿದ್ದಾರೆ.
ಟೂರ್ನಿ ಸ್ವರೂಪದ ಬಗ್ಗೆ ಮಾತನಾಡಿದ ಪಟೇಲ್, ಐಪಿಎಲ್‌ಅನ್ನು ಪೂರ್ಣ ಪ್ರಮಾಣದ ಸ್ವರೂಪದೊಂದಿಗೆ ನಡೆಸಲು ಬಯಸಿದ್ದೇವೆ. ಆದರೆ ಪರಿಸ್ಥಿತಿ ನೋಡಿಕೊಂಡು ಅದಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.