ಬೆಂಗಳೂರು: ಐಪಿಎಲ್ ಕ್ರಿಕೆಟ್‌ನ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಡಿಸೆಂಬರ್ನಲ್ಲಿ ನಡೆಯಲಿದ್ದು ಎಲ್ಲಾ ತಂಡಗಳೂ ಕೂಡಾ ಸಾಮರ್ಥ್ಯ ತೋರಿಸದ ಕೆಲವು ಆಟಗಾರರನ್ನು ಕೈಬಿಡಲು ನಿರ್ಧರಿಸಿವೆ. ಈ ಮಧ್ಯೆ ಆರ್‌ಸಿಬಿ ತಾನು ತಂಡದಿಂದ ಕೈಬಿಡಲು ನಿರ್ಧರಿಸಿದ ಆಟಗಾರನನ್ನು ಪ್ರತಿಭೆ ಪುರಸ್ಕರಿಸಿ ಇದೀಗ ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.
ಆರ್‌ಸಿಬಿ 5 ಕೋಟಿ ರೂ ಮೊತ್ತ ನೀಡಿ ಖರೀದಿಸಿದ್ದ ಮುಂಬೈನ ಆಲ್ರೌಂಡರ್ ಶಿವಂ ದುಬೆಯನ್ನು ಕೈಬಿಡಲು ನಿರ್ಧರಿಸಿತ್ತು. ಆದರೆ ದುಬೆ ಕಳೆದವಾರವಷ್ಟೇ ಮುಗಿದ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದರ ಬೆನ್ನಲ್ಲೇ ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಶಿವಂ ದುಬೆಯನ್ನು ತಂಡದಿಂದ ಕೈಬಿಡುವ ಆಲೋಚನೆಯಿಂದ ಆರ್‌ಸಿಬಿ ಹೊರಬಂದಿದ್ದು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.
ಶಿವಂ ದುಬೆಯನ್ನು ಆರ್‌ಸಿಬಿ ಬಿಟ್ಟುಕೊಟ್ಟಿದ್ದರೆ ಉತ್ತರದ ಫ್ರಾಂಚೈಸಿಗಳು ಖರೀದಿಸಲು ಕಾಯುತ್ತಿದ್ದರು ಎನ್ನಲಾಗಿದೆ. ದುಬೆ ವಿಜಯ್ ಹಜಾರೆಯಲ್ಲಿ ಕರ್ನಾಟಕ ವಿರುದ್ದ ಕೇವಲ 67 ಎಸೆತಗಳಲ್ಲಿ ಶತಕ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆರ್‌ಸಿಬಿ ಆಲ್ರೌಂಡರ್ ಆಟಗಾರನನ್ನು ತನ್ನಲ್ಲೇ ಉಳಿಸಿಕೊಂಡು ತಂಡದ ಸಮತೋಲನ ಕಾಪಾಡಲು ನಿರ್ಧರಿಸಿದೆ.
13ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.