ನವದೆಹಲಿ: ಕೊರೊನಾ ಭೀತಿ ಹಾಗೂ ಲಾಕ್ಡೌನ್ ತಂದಿಟ್ಟ ಸಂಕಷ್ಟದಿಂದಾಗಿ ಅನೇಕ ಕ್ರೀಡಾಕೂಟ ಮುಂದೂಡಿಕೆಯಾಗಿವೆ. ಈಗಾಗಲೇ ಆರಂಭಗೊಳ್ಳಬೇಕಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮುಂದೂಡಿಕೆಯಾಗಿರುವ ಕಾರಣ ಅದು ಯಾವಾಗ ಆರಂಭಗೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಬೌಲರ್ ಆಶಿಶ್ ನೆಹ್ರಾ, ದೇಶ ಸಾಮಾನ್ಯ ಸ್ಥಿತಿಗೆ ಮರಳಿದರೆ ಅಕ್ಟೋಬರ್ನಲ್ಲಿ ಶೇ.100ರಷ್ಟು ಈ ಟೂರ್ನಿ ನಡೆಯಲಿದೆ ಎಂದು ಹೇಳಿದ್ದಾರೆ.
ಮಾರ್ಚ್ 29ರಿಂದ ಆರಂಭಗೊಳ್ಳಬೇಕಾಗಿದ್ದ ಟೂರ್ನಿ ಕೋವಿಡ್-19ನಿಂದಾಗಿ ಮುಂದೂಡಿಕೆಯಾಗಿದೆ. ಆಗಸ್ಟ್ನಲ್ಲಿ ಟೂರ್ನಿ ಆಯೋಜನೆಗೊಂಡರೆ ಮಳೆ ಹೆಚ್ಚಾಳಿ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಅನೇಕ ಪಂದ್ಯಗಳು ರದ್ಧುಗೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹತೋಟಿಗೆ ಬಂದು ಎಲ್ಲವೂ ಈ ಹಿಂದಿನಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಟೂರ್ನಿ ಆಯೋಜನೆ ಮಾಡಬಹುದು ಎಂದಿದ್ದಾರೆ.
ಇದೇ ವೇಳೆ ಯುವರಾಜ್ ಸಿಂಗ್ ಕುರಿತು ಮಾತನಾಡಿರುವ ನೆಹ್ರಾ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಯುವಿ ಕ್ರಿಕೆಟ್ ಕೆರಿಯರ್ ಅದ್ಭುತವಾಗಿತ್ತು.ಪ್ರತಿಯೊಬ್ಬ ಆಟಗಾರನಿಗೆ ನೆಚ್ಚಿನ ನಾಯಕನಿರುತ್ತಾನೆ. ಅದೇ ರೀತಿಯಾಗಿ ಯುವರಾಜ್ ಸಿಂಗ್ 16 ವರ್ಷದ ಕ್ರಿಕೆಟ್ ಕೆರಿಯರ್ನಲ್ಲಿ ಧೋನಿ ನೆಚ್ಚಿನ ಕ್ಯಾಪ್ಟನ್ ಆಗಿದ್ದರೂ ಎಂದಿದ್ದಾರೆ.