ಮುಂಬೈ: ಕೋವಿಡ್ 19 ಭೀತಿಯಿಂದ ಯುಎಇನಲ್ಲಿ 13ನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಆದರೆ 14ನೇ ಆವೃತ್ತಿಯನ್ನು ಭಾರತದಲ್ಲೇ ಏಪ್ರಿಲ್ನಲ್ಲಿ ಆಯೋಜಿಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಘೋಷಿಸಿದ್ದಾರೆ.
ಸೆಪ್ಟೆಂಬರ್ 19ರಿಂದ 13ನೇ ಆವೃತ್ತಿ ಆರಂಭವಾಗಲಿದೆ. ನವೆಂಬರ್ 10ರಂದು ಫೈನಲ್ ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೀಕೆಂಡ್ ಬದಲು ಮಂಗಳವಾರ ಫೈನಲ್ ಪಂದ್ಯ ನಡೆಯುತ್ತಿದೆ.
ಬಿಸಿಸಿಐನ ಎಲ್ಲ ಅಂಗಸಂಸ್ಥೆಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ಮುಂದಿನ ವರ್ಷ ಭಾರತ ಹಲವು ಸರಣಿಗಳಿಗೆ ಆತಿಥ್ಯ ವಹಿಸಲಿದೆ ಹಾಗೂ ಟಿ-20 ವಿಶ್ವಕಪ್ ಆಯೋಜಿಸಲಿದೆ. 2023ರ ಏಕದಿನ ವಿಶ್ವಕಪ್ ಕೂಡ ಭಾರತದಲ್ಲೇ ನಡೆಯಲಿದೆ ಎಂದು ವಿವರಿಸಿದ್ದಾರೆ.

"ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುಎಇಯಲ್ಲಿ ಬಿಸಿಸಿಐ ಐಪಿಎಲ್ 2020 ಅನ್ನು ಆಯೋಜಿಸಲಿದೆ ಎಂದು ನಮ್ಮ ಎಲ್ಲ ಸದಸ್ಯರಿಗೆ ತಿಳಿಸಲು ನಾನು ಸಂತೋಷಪಡುತ್ತೇವೆ. ಐಪಿಎಲ್ ಸುಗಮವಾಗಿ ನಡೆಸಲು ಅಗತ್ಯ ಇರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ" ಎಂದು ಗಂಗೂಲಿ ಪತ್ರದಲ್ಲಿ ಬರೆದಿದ್ದಾರೆ.

ನಾವು ದೇಶಿ ಕ್ರಿಕೆಟ್ ಆರಂಭಿಸುವುದರ ಕುರಿತು ಚರ್ಚೆಯಲ್ಲಿದ್ದೇವೆ. ಯಾವಾಗ ಪರಿಸ್ಥಿತಿ ನಮಗೆ ಅನುವು ಮಾಡಿಕೊಟ್ಟ ನಂತರ ದೇಶೀಯ ಕ್ರಿಕೆಟ್ ಪುನಾರಂಭದ ಬಗ್ಗೆ ಬಿಸಿಸಿಐ ಚಿಂತಿಸಲಿದೆ. ನಮಗೆ ದೇಶೀಯ ಕ್ರಿಕೆಟ್ ಆಟಗಾರರು ಮತ್ತು ಸಿಬ್ಬಂದಿ ಆರೋಗ್ಯ ಬಹಳ ಮುಖ್ಯವಾಗಿದೆ. ಹಾಗಾಗಿ ಎಲ್ಲ ವಿಚಾರಗಳ ಬಗ್ಗೆ ನಿರಂತರ ಮೇಲ್ವಿಚಾರಣೆ ಮಾಡುತ್ತಿದ್ದೇವೆ, ಎಲ್ಲ ಬೋರ್ಡ್ಗಳ ಸದಸ್ಯರ ಈ ಕುರಿತು ಸಲಹೆಯನ್ನು ನೀಡಬಹುದು ಎಂದು ತಿಳಿಸಿದ್ದಾರೆ.

ಐಪಿಎಲ್ ಮುಗಿಯುತ್ತಿದ್ದಂತೆ ಆಸ್ಟ್ರೇಲಿಯಾಗೆ ಪ್ರವಾಸ ಬೆಳಸಲಿದೆ. ಅಲ್ಲಿಂದ ಬಂದ ನಂತರ ಇಂಗ್ಲೆಂಡ್ ವಿರುದ್ಧ ಸರಣಿಯನ್ನಾಡಲಿದೆ. ನಂತರ ಏಪ್ರಿಲ್ನಲ್ಲಿ ಐಪಿಎಲ್ ಆಯೋಜಿಸಲು ನಿರ್ಧರಿಸಲಾಗಿದೆ. ಮಹಿಳಾ ತಂಡದ ಇಂಗ್ಲೆಂಡ್ ಪ್ರವಾಸದ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸಲಿದ್ದೇವೆ ಎಂದು ದಾದಾ ಹೇಳಿದ್ದಾರೆ.