ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಯುವ ಆಟಗಾರರಿಗೆ ಒಂದು ಅತ್ಯುತ್ತಮ ವೇದಿಕೆ. ಈ ಶ್ರೀಮಂತ ಲೀಗ್ ದೇಶದ ಕ್ರಿಕೆಟಿಗರಿಗಷ್ಟೇ ಅಲ್ಲದೆ ಕೆಲವು ವಿದೇಶದ ಕ್ರಿಕೆಟಿಗರಿಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವಕಾಶ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿದೆ.
ಭಾರತ ಟೆಸ್ಟ್ ತಂಡದ ಸ್ಟಾರ್ ಬೌಲರ್ ಆರ್ ಅಶ್ವಿನ್ ಸೇರಿದಂತೆ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಪಾಂಡ್ಯ ಬ್ರದರ್ಸ್, ರಿಷಭ್ ಪಂತ್ ಹೀಗೆ ಹಲವು ಕ್ರಿಕೆಟಿಗರು ರಾಷ್ಟ್ರೀಯ ತಂಡದ ಪರ ಆಡುವ ಕನಸಿಗೆ ಐಪಿಎಲ್ ದಾರಿ ದೀಪವಾಗಿದೆ. ಡೇವಿಡ್ ವಾರ್ನರ್, ಸ್ಟಿವ್ ಸ್ಮಿತ್, ಶಾನ್ ಮಾರ್ಶ್ಗೂ ಇಂಡಿಯನ್ ಪ್ರೀಮಿಯರ್ ಲೀಗ್ ವೇದಿಕೆಯಾಗಿತ್ತು.
ಆದರೆ ಇಂತಹ ಮಹಾನ್ ವೇದಿಕೆಯಲ್ಲಿ ಮಿಂಚಿದರೂ ಸಹ ಕೆಲವರು ಮುಂದಿನ ಆವೃತ್ತಿಗಳಲ್ಲಿ ತಂಡದ 11ರ ಬಳಗದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾದರು. ಅಂತಹ 5 ಆಟಗಾರರ ವಿವರ ಇಲ್ಲಿದೆ.
ಪಾಲ್ ವಲ್ತಾಟಿ(ಕಿಂಗ್ಸ್ ಇಲೆವೆನ್ ಪಂಜಾಬ್)
2011ರ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅವರು 14 ಪಂದ್ಯಗಳಿಂದ 35.61 ರ ಸರಾಸರಿಯಲ್ಲಿ 2 ಶತಕಗಳ ಸಹಿತ 463 ರನ್ ಗಳಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 63 ಎಸೆತಗಳಲ್ಲಿ 120 ರನ್ ಸಿಡಿಸಿ ಭಾರತದ ಭವಿಷ್ಯದ ಕ್ರಿಕೆಟಿಗ ಆಗಲಿದ್ದಾರೆ ಎಂಬ ಭರವಸೆ ಮೂಡಿಸಿದ್ದರು.
ಆದರೆ 2012ರ ಆವೃತ್ತಿಯಲ್ಲಿ ಕೇವಲ 6 ಪಂದ್ಯ ಹಾಗೂ 2013ರಲ್ಲಿ ಕೇವಲ ಒಂದೇ ಪಂದ್ಯವನ್ನಾಡಿದ ವಲ್ತಾಟಿ ಐಪಿಎಲ್ನಿಂದಲೇ ಮರೆಯಾದರು. ಪ್ರಸ್ತುತ ಅವರು ಏರ್ ಇಂಡಿಯಾ ತಂಡದ ಉದ್ಯೋಗಿಗಳ ಜೊತೆ ಕ್ರಿಕೆಟ್ ಆಡುತ್ತಿದ್ದಾರೆ.
ರಾಹುಲ್ ಶರ್ಮಾ(ಡೆಕ್ಕನ್ ಚಾರ್ಜಸ್)
ಈ ಯುವ ಸ್ಪಿನ್ನರ್ ತಮ್ಮ ಅದ್ಭುತ ಬೌಲಿಂಗ್ ಕೌಶಲ್ಯವನ್ನು ನೋಡಿದವರು ಅಶ್ವಿನ್ ಜೊತೆ ಹೋಲಿಕೆ ಮಾಡುತ್ತಿದ್ದರು. ಅವರು 2011ರಲ್ಲಿ ಡೆಕ್ಕನ್ ಚಾರ್ಜಸ್ ಪರ 14 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ಮಿಂಚಿದ್ದರು. ನಂತರ ಪುಣೆ ವಾರಿಯರ್ಸ್ ತಂಡಕ್ಕೆ ವರ್ಗಾವಣೆಗೊಂಡರು. 2012ರಲ್ಲಿ ಭಾರತ ತಂಡಕ್ಕೂ ಪಾದಾರ್ಪಣೆ ಮಾಡಿ 4 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದರು.
ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ ಮತ್ತು ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ಮುಂಬೈ ಪಾರ್ಟಿಯೊಂದರಲ್ಲಿ ಮಾದಕ ವಸ್ತುವನ್ನು ಸೇವಿಸಿರುವುದು ಖಚಿತವಾದ ಮೇಲೆ ಅವರ ವೃತ್ತಿ ಜೀವನ ಮೊಟುಕುಗೊಂಡಿತು. ಪ್ರಸ್ತುತ ಶರ್ಮಾ ಪಂಜಾಬ್ನ ಅಂತರ್ ಜಿಲ್ಲಾ ಪಂದ್ಯಗಳನ್ನಾಡುತ್ತಿದ್ದಾರೆ. ಮತ್ತು ಪಂಜಾಬ್ ತಂಡದ ಪರ ದೇಶಿಯ ಕ್ರಿಕೆಟ್ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.
ಸ್ವಪ್ನಿಲ್ ಆಸ್ನೋಡಕರ್(ರಾಜಸ್ಥಾನ್ ರಾಯಲ್ಸ್)
ಸ್ವಪ್ನಿಲ್ 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ಗೆದ್ದ ರಾಜಸ್ಥಾನ್ ತಂಡದ ಪ್ರಮುಖ ಆಟಗಾರರಾಗಿದ್ದರು. ಬಲಗೈ ಆಟಗಾರನಾಗಿದ್ದ ಅವರು 9 ಪಂದ್ಯಗಳಿಂದ 311 ರನ್ ಸಿಡಿಸುವ ಮೂಲಕ ಭಾರತ ತಂಡಕ್ಕೆ ಆಡಲಿರುವ ಆಟಗಾರ ಎಂದು ಗುರುತಿಸಿಕೊಂಡರು. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಜೊತೆಗೂಡಿ 59.71 ರ ಸರಾಸರಿಯಲ್ಲಿ 418 ರನ್ ಆರಂಭಿಕ ಜೊತೆಯಾಟ ನೀಡಿ ಟೂರ್ನಮೆಂಟ್ ಗೆಲ್ಲಲು ನೆರವಾಗಿದ್ದರು.
ಆದರೆ ಮುಂದಿನ 11 ಐಪಿಎಲ್ ಪಂದ್ಯಗಳಿಂದ 112 ರನ್ ಮಾತ್ರ ಗಳಿಸಿದ ಅವರು ಮುಂದೆಂದು ಟಿ20 ಲೀಗ್ನಲ್ಲಿ ಕಾಣಿಸಿಕೊಳ್ಳಲಿಲ್ಲ. ಐಪಿಎಲ್ ಅಷ್ಟೇ ಅಲ್ಲ, ಅವರು 2011ರಿಂದ ಗೋವಾ ತಂಡದಲ್ಲೂ ಕಾಣಿಸಿಕೊಂಡಿಲ್ಲ.
ಮನ್ವಿಂದರ್ ಬಿಸ್ಲಾ(ಕೆಕೆಆರ್)
2012 ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 89 ರನ್ ಸಿಡಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚೊಚ್ಚಲ ಐಪಿಎಲ್ ಪ್ರಶಸ್ತಿ ತಂದುಕೊಟ್ಟಿದ್ದರು. ಬಿಸ್ಲಾರನ್ನು 2009ರಲ್ಲಿ ಡೆಕ್ಕನ್ ಜಾರ್ಜಸ್ ಖರೀದಿಸಿತ್ತು. ಆದರೆ ಕೇವಲ 6 ಪಂದ್ಯಗಳನ್ನಷ್ಟೇ ಆಡಿದರು. ನಂತರ 2012ರ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ 2013ರಲ್ಲೂ ಕೆಕೆಆರ್ ತಂಡದಲ್ಲೇ ಉಳಿದುಕೊಂಡು 14 ಪಂದ್ಯಗಳಿಂದ 255 ರನ್ ಸಿಡಿಸಿದರು. 2015ರಲ್ಲಿ ತಂಡದಿಂದ ಬಿಡುಗಡೆ ಹೊಂದಿದ ಅವರನ್ನು ಆರ್ಸಿಬಿ ತಂಡ ಖರೀದಿಸಿದರೂ ಬಹುತೇಕ ಬೆಂಚ್ ಕಾಯಿಸಿತು. ಪರಿಣಾಮ ಅವರು 2016, 2017ರಲ್ಲಿ ಅನ್ಸೋಲ್ಡ್ ಆಗುವುದರೊಂದಿಗೆ ಐಪಿಎಲ್ಗೆ ಕಮ್ಬ್ಯಾಕ್ ಆಗಲು ವಿಫಲರಾದರು.
ಡಾಗ್ ಬೊಲಿಂಜರ್(ಚೆನ್ನೈ ಸೂಪರ್ ಕಿಂಗ್ಸ್)
ಡಾಗ್ ಬೊಲಿಂಜರ್ ಐಪಿಎಲ್ನಲ್ಲಿ ಭರವಸೆಯ ಬೌಲರ್ ಎನಿಸಿಕೊಂಡಿದ್ದರು. 2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದ ತಂಡದಲ್ಲಿದ್ದ ಬೊಲಿಂಜರ್ 2011ರಲ್ಲಿ ತಂಡ ಸತತ ಎರಡು ಪ್ರಶಸ್ತಿಗಳನ್ನು ಗೆಲ್ಲಲು ನೆರವಾಗಿದ್ದರು. ಅವರು 27 ಪಂದ್ಯಗಳಿಂದ 37 ವಿಕೆಟ್ ಪಡೆದಿದ್ದರು. ಆಶ್ಚರ್ಯಕರ ಸಂಗತಿಯೆಂದರೆ ನಂತರದ ಆವೃತ್ತಿಗಳಲ್ಲಿ ಅವರು ಉತ್ತಮ ದಾಖಲೆ ಪ್ರದರ್ಶನದ ಹೊರತಾಗಿಯೂ ಹರಾಜಿನಲ್ಲಿ ಕಡೆಗಣಿಸಲ್ಪಟ್ಟರು.