ಅಬುಧಾಬಿ : ಮಂಗಳವಾರ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ 15 ರನ್ಗಳಿಂದ ಸೋಲು ಕಂಡಿದೆ. ಆದರೆ, ಸೋಲಿನಲ್ಲಿ ಅದ್ಭುತ ಪ್ರದರ್ಶನ ತೋರಿದ ಕಗಿಸೋ ರಬಾಡ 2 ವಿಕೆಟ್ ಪಡೆದು ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಈ ಮೂಲಕ ಶಮಿ ಬಳಿಯಿದ್ದ ಪರ್ಪಲ್ ಕ್ಯಾಪ್ ಮರಳಿ ಪಡೆದಿದ್ದಾರೆ.
3 ಪಂದ್ಯಗಳನ್ನಾಡಿರುವ ಕಗಿಸೋ ರಬಾಡ ಒಟ್ಟು 7 ವಿಕೆಟ್ ಪಡೆದಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೊಹ್ಮದ್ ಶಮಿ ಕೂಡ 3 ಪಂದ್ಯಗಳಿಂದ 7 ವಿಕೆಟ್ ಪಡೆದಿದ್ದಾರೆ. ಆದರೆ, ಸರಾಸರಿಯಲ್ಲಿ ರಬಾಡ 10.71 ಇದ್ದರೆ, ಶಮಿ 11.71 ಸರಾಸರಿ ಕಾಯ್ದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸ್ಯಾಮ್ ಕರ್ರನ್ 5 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ ಎಲ್ ರಾಹುಲ್ 222 ರನ್ಗಳೊಂದಿಗೆ ಆರೆಂಜ್ ಕ್ಯಾಪ್‌ನ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಅವರು 3 ಪಂದ್ಯಗಳಿಂದ ಒಂದು ಶತಕ ಹಾಗೂ ಒಂದು ಅರ್ಧಶತಕದ ಸಹಿತ 222 ರನ್ಗಳಿಸಿದ್ರೆ, ಮತ್ತೊಬ್ಬ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವರೇ ಆದ ಮಯಾಂಕ್ ಅಗರ್ವಾಲ್ 221ರನ್ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಾಫ್ ಡು ಪ್ಲೆಸಿಸ್ 173 ರನ್ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.