ಅಬುಧಾಬಿ: 13ನೇ ಆವೃತ್ತಿಯ ಐಪಿಎಲ್ನ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ-ಆರ್ಸಿಬಿ ಮುಖಾಮುಖಿಯಾಗಿದ್ದು, ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕೊಹ್ಲಿ ಪಡೆ ಎದುರಾಳಿ ತಂಡದ ಗೆಲುವಿಗೆ 153 ರನ್ ಟಾರ್ಗೆಟ್ ನೀಡಿದೆ.
ಆರ್ಸಿಬಿ ಪರ ಪಡಿಕ್ಕಲ್ 50, ಕೊಹ್ಲಿ 29, ಡಿವಿಲಿಯರ್ಸ್ 35 ಹಾಗೂ ದುಬೆ 17 ರನ್ ಗಳಿಸಿದ್ದು, 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಲಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. 12 ರನ್ ಗಳಿಸಿದ್ದ ಪಿಲಿಪ್ಪೆ ರಬಾಡ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಒಂದಾದ ಪಡಿಕ್ಕಲ್ ಹಾಗೂ ಕ್ಯಾಪ್ಟನ್ ಕೊಹ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇಬ್ಬರು ಸೇರಿ 57 ರನ್ಗಳ ಜೊತೆಯಾಟ ಆಡಿದರು.
29 ರನ್ ಗಳಿಸಿದ್ದ ವೇಳೆ ಕೊಹ್ಲಿ ಅಶ್ವಿನ್ ಬೌಲಿಂಗ್ನಲ್ಲಿ ಔಟ್ ಆದರು. ಇದಾದ ಬಳಿಕ ಅರ್ಧಶತಕ ಗಳಿಸಿದ್ದ ಪಡಿಕ್ಕಲ್(50) ನಾರ್ಟ್ಜೆ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮೋರಿಸ್ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ನೀಡಿದರು. ಈ ಮೂಲಕ ತಂಡ 15.6 ಓವರ್ಗಳಲ್ಲಿ 112 ರನ್ ಗಳಿಸಿತು.
ಬಳಿಕ ಡಿವಿಲಿಯರ್ಸ್(35) ಹಾಗೂ ದುಬೆ(17) ಉತ್ತಮ ಇನ್ನಿಂಗ್ಸ್ ಆಡಿದರು. ಇವರ ವಿಕೆಟ್ ಬಿಳುತ್ತಿದ್ದಂತೆ ಉದಾನ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಡೆಲ್ಲಿ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ನಾರ್ಟ್ಜೆ 3, ರಬಾಡ 2 ಹಾಗೂ ಅಶ್ವಿನ್ 1 ವಿಕೆಟ್ ಪಡೆದುಕೊಂಡರು.