ಕರಾಚಿ : ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ತೋರಿದ ನೀರಸ ಪ್ರದರ್ಶನಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ಆಸ್ಟ್ರೇಲಿಯಾ ಮತ್ತೆ ಬ್ಯಾಟಿಂಗ್ ಮಾಡುವುದನ್ನು ನೋಡಿದಾಗ ನನ್ನ ಕಣ್ಣುಗಳನ್ನು ನಂಬಲು ಸಾಧ್ಯವಾಗಲಿಲ್ಲ. ಅವರಿಗೆ ಗೆಲ್ಲಲು ಕೇವಲ 90 ರನ್ಗಳ ಅಗತ್ಯವಿದೆ ಎಂದು ತೋರಿಸುತ್ತಿತ್ತು" ಎಂದು ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಮೊಹ್ಸಿನ್ ಖಾನ್ ಹೇಳಿದ್ದಾರೆ.
"ನಾನು ಟೀಂ ಇಂಡಿಯಾ ಆಟಗಾರರು ಔಟ್ ಆದ ರೀತಿ ನೋಡಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಪಿಚ್ನ ಮೇಲ್ಮೈಯಲ್ಲಿ ಯಾವುದೇ ತಪ್ಪಿಲ್ಲ. ಬ್ಯಾಟ್ಸ್‌ಮನ್‌ಗಳು ತೀಕ್ಷ್ಣತೆಯ ಕೊರತೆಯನ್ನು ತೋರಿಸಿದ್ದಾರೆ. ಆಸ್ಟ್ರೇಲಿಯಾದ ವೇಗಿಗಳ ವಿರುದ್ಧ ಏನು ಮಾಡಬೇಕೆಂಬುದರ ಬಗ್ಗೆ ಅವರು ಎರಡು ಮನಸ್ಸಿನಲ್ಲಿದ್ದರು" ಎಂದು ಮೊಹ್ಸಿನ್ ಹೇಳಿದ್ದಾರೆ.
ಮಾಜಿ ನಾಯಕ ರಶೀದ್ ಲತೀಫ್ ಅವರು 2002ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 59 ಮತ್ತು 53 ರನ್‌ಗಳಿಗೆ ಆಲ್ಔಟ್ ಆಗಿದ್ದಾಗ ಪಾಕಿಸ್ತಾನ ತಂಡ ಇದೇ ರೀತಿಯ ಪರಿಸ್ಥಿತಿಗೆ ಸಿಲುಕಿತ್ತು ಎಂದಿದ್ದಾರೆ.
"ಬೌಲರ್‌ಗಳು 100 ರಷ್ಟು ಸರಿಯಾದ ಸ್ಥಳಕ್ಕೆ ಚೆಂಡನ್ನು ಎಸೆದಾಗ ಇಂತಹ ಫಲಿತಾಂಶ ದೊರಕುತ್ತದೆ. ಪಿಚ್ ತನ್ನ ನಡವಳಿಕೆಯನ್ನು ಬದಲಾಯಿಸಿತು. ಮೊದಲ ಎರಡು ದಿನಗಳಲ್ಲಿ ಅದು ಸ್ವಲ್ಪ ಸ್ಪಂಜಿನ ಬೌನ್ಸ್ ಹೊಂದಿತ್ತು ಮತ್ತು ಸ್ವಲ್ಪ ನಿಧಾನವಾಗಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ, ನಂತರ ಪಿಚ್ ಸ್ವಲ್ಪ ಗಟ್ಟಿಯಾಯಿತು ಮತ್ತು ಚೆಂಡುಗಳು ಸ್ಕಿಡ್ ಆಗುತ್ತಿದ್ದವು. ಅದಕ್ಕಾಗಿಯೇ ಎಲ್ಲಾ ಚೆಂಡುಗಳು ಬ್ಯಾಟ್ನ ಅಂಚಿಗೆ ತಾಗಿ ನೇರವಾಗಿ ಫೀಲ್ಡರ್ಗಳ ಕೈಗೆ ಹೋದವು" ಎಂದಿದ್ದಾರೆ.