ಬ್ರಿಸ್ಬೇನ್: ಭಾರತ ಕ್ರಿಕೆಟ್ನ ಲೆಜೆಂಡ್ ಸುನೀಲ್ ಗವಾಸ್ಕರ್ ಪ್ರಸ್ತುತ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ತೋರುತ್ತಿರುವ ಅಸಾಧಾರಣ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
4ನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡ 324 ರನ್ಗಳ ಗುರಿ ನೀಡಿದ್ದು, ಭಾರತ ವಿಕೆಟ್ ನಷ್ಟವಿಲ್ಲದೆ 4 ರನ್ಗಳಿಸಿ 5ನೇ ದಿನಕ್ಕೆ ಕಾಯುತ್ತಿದೆ. ಆದರೆ ಗಬ್ಬಾದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದ ಫಲಿತಾಂಶ ಏನೇ ಆದರೂ ಭಾರತೀಯರು ನಮ್ಮ ಕ್ರಿಕೆಟಿಗರ ಬಗ್ಗೆ ಖಂಡಿತ ಹೆಮ್ಮೆ ಪಡಬೇಕು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಗಾಯದಿಂದ ಕ್ಷೀಣಿಸಿರುವ ಭಾರತ ತಂಡ ನಾಳಿನ ಪಂದ್ಯ ಗೆದ್ದರೆ, ಸತತ ಎರಡು ಸರಣಿ ಗೆದ್ದಂತಾಗುತ್ತದೆ. ಒಂದು ವೇಳೆ ಡ್ರಾ ಸಾಧಿಸಿದರೆ ಬಾರ್ಡರ್ ಗವಾಸ್ಕರ್ ಸರಣಿ ತನ್ನಲ್ಲೇ ಉಳಿಸಿಕೊಳ್ಳಲಿದೆ. ಆದರೆ ಗಬ್ಬಾದಲ್ಲಿ ಪಿಚ್ ತುಂಬಾ ಕಠಿಣವಾಗಿದೆ. ಅಲ್ಲಿ ಬಿರುಕುಗಳಿದ್ದು, ಚೆಂಡು ಕೆಟ್ಟದಾಗಿ ವರ್ತಿಸುವುದರಿಂದ ಭಾರತೀಯ ಬ್ಯಾಟ್ಸ್ಮನ್ಗಳು ಜಾಗರೂಕತೆಯಿಂದ ಆಡಬೇಕಿದೆ.
"ಗಬ್ಬಾದಲ್ಲಿ ಫಲಿತಾಂಶ ಏನಾಗಲಿದೆ ಎಂಬುದು ವಿಷಯವಲ್ಲ. ನಾವು ಭಾರತೀಯರು ನಮ್ಮ ಕ್ರಿಕೆಟಿಗರ ಬಗ್ಗೆ ಹೆಮ್ಮ ಪಡಬೇಕು. ನಾನು ಅನೇಕ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದೇನೆ. ಆದರೆ ಮೊದಲ ಬಾರಿ ಈ ಪ್ರವಾಸ ಎಷ್ಟು ಸವಾಲಿನದ್ದಾಗಿದೆ ಎನಿಸುತ್ತಿದೆ. ಆದರೆ ನಾವು ಇಂತಹ ಅದ್ಭುತ ಸರಣಿಗೆ ಸಾಕ್ಷಿಯಾಗಿರುವುದು ಅಸಾಧಾರಣ ಸಂಗತಿಯಾಗಿದೆ" ಎಂದು ಅವರು ತಿಳಿಸಿದ್ದಾರೆ.
ತಂಡ ಪ್ರದರ್ಶಿಸುತ್ತಿರುವ ಧೈರ್ಯ ಮತ್ತು ಹೋರಾಟದ ಮನೋಭಾವವು ಸ್ಫೂರ್ತಿದಾಯಕವಾಗಿದೆ. ಸರಣಿಯಲ್ಲಿರುವ ಹೆಚ್ಚಿನ ಮಂದಿ ಐದು ತಿಂಗಳಿನಿಂದ ಬಯೋ ಬಬಲ್ನಲ್ಲಿದ್ದಾರೆ. ಈ ಅವಧಿಯಲ್ಲಿ ತಮ್ಮ ಸ್ನೇಹಿತರು ಗಾಯಗಳಿಂದ ಜರ್ಜರಿತರಾಗುವುದನ್ನು ಅವರು ಕಣ್ಣಾರೆ ಕಂಡಿದ್ದಾರೆ. ಪ್ರತಿ ತಿರುವಿನಲ್ಲೂ, ಪ್ರತಿ ನಿಮಿಷಕ್ಕೆ ಅವರನ್ನು ಕ್ರಿಕೆಟ್ ವಿಚಾರದಲ್ಲಿ ಮತ್ತು ಮಾನಸಿಕವಾಗಿ ಪರೀಕ್ಷಿಸಲಾಗಿದೆ. ತೀವ್ರವಾದ ಒತ್ತಡದ ನಡುವೆಯೂ ಅವರು ತಮ್ಮ ಹೋರಾಟವನ್ನು ಮಾತ್ರ ನಿಲ್ಲಿಸಿಲ್ಲ. ಈಗಲೂ ಟ್ರೋಫಿಯನ್ನು ಮನೆಗೆ ತರುವ ಆಶಯದಲ್ಲೇ ಇದ್ದಾರೆ ಎಂದು ಟೀಮ್ ಇಂಡಿಯಾ ಆಟಗಾರರನ್ನು ಗವಾಸ್ಕರ್ ಮುಕ್ತ ಕಂಠದಿಂದ ಹೊಗಳಿದ್ದಾರೆ.
ಶಾರ್ದುಲ್ ಠಾಕೂರ್ ಆಲ್ರೌಂಡ್ ಆಟ ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿದೆ : ಸಚಿನ್ ಶ್ಲಾಘನೆ