ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಧೋನಿ ತವರಿನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಹಣಾಹಣಿಯಲ್ಲಿ ಟೀಂ ಇಂಡಿಯಾ ಆಟಗಾರರು ಹಿಡಿತ ಸಾಧಿಸಿದ್ದಾರೆ. ರೋಹಿತ್ ದ್ವಿಶತಕ ಮತ್ತು ರಹಾನೆ ಶತಕದ ನೆರವಿನಿಂದ ಭಾರತ ತಂಡ 497 ರನ್ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಹರಿಣ ಪಡೆಗೆ ವೇಗಿ ಶಮಿ ಮತ್ತು ಉಮೇಶ್ ಯಾದವ್ ಶಾಕ್ ನೀಡಿದ್ದಾರೆ. ಆರಂಭಿಕ ಆಟಗಾರರಾದ ಡೀನ್ ಎಲ್ಗರ್(0), ಕ್ವಿಂಟನ್ ಡಿ ಕಾಕ್(4) ಕ್ರೀಸಿಗೆ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಸದ್ಯ ರಾಂಚಿಯಲ್ಲಿ ಮೋಡ ಮುಸುಕಿದ ವಾತಾವರಣವಿದ್ದು ಬೆಳಕಿನ ತೊಂದರೆಯಿಂದ ಎರಡನೇ ದಿನದಾಟ ಕೊನೆಗೊಂಡಿದೆ.
ನಿನ್ನೆ ಶತಕಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಿಕ ಆಟಗಾರ ರೋಹಿತ್ ಶರ್ಮಾ(212) ಇಂದು ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದ್ರು. ರಹಾನೆ (115) ಕೂಡ 3 ವರ್ಷಗಳ ನಂತರ ಟೆಸ್ಟ್ನಲ್ಲಿ ಶತಕ ಗಳಿಸಿದ್ರು. ದ್ವಿತೀಯ ಟೆಸ್ಟ್ನಲ್ಲಿ ಅರ್ಧ ಶತಕ ಸಿಡಿಸಿದ್ದ ರವೀಂದ್ರ ಜಡೇಜಾ ಇಂದು ಕೂಡಾ ಅರ್ಧಶತಕದ ಸಾಧನೆ ಮಾಡಿದ್ರು. ವೇಗಿ ಉಮೇಶ್ ಯಾದವ್ ಎದುರಿಸಿದ 10 ಬಾಲ್ಗಳಲ್ಲೆ 5 ಸಿಕ್ಸರ್ ಸಿಡಿಸಿ ಮಿಂಚಿದ್ರು. ಅಂತಿಮವಾಗಿ ಟೀಂ ಇಂಡಿಯಾ 116.3 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 497 ರನ್ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಇತ್ತ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಇಬ್ಬರು ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 5 ಓವರ್ಗಳಲ್ಲಿ 2 ನಷ್ಟಕ್ಕೆ 9 ರನ್ಗಳಿಸಿದೆ.