ವಿಶಾಖಪಟ್ಟಣಂ: ಆತಿಥೇಯ ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ದಕ್ಷಿಣ ಆಫ್ರಿಕಾ ಪ್ರತ್ಯುತ್ತರ ನೀಡಿದ್ದು, ಎಲ್ಗರ್,ಡಿಕಾಕ್ ಶತಕ ಸಿಡಿಸಿ ಮಿಂಚಿದ್ದಾರೆ. ಸದ್ಯ 8ವಿಕೆಟ್ನಷ್ಟಕ್ಕೆ ದಕ್ಷಿಣ ಆಫ್ರಿಕಾ 385ರನ್ಗಳಿಕೆ ಮಾಡಿದೆ.
ಭಾರತದ 502ರನ್ಗೆ ಪ್ರತ್ಯುತ್ತರವಾಗಿ ನಿನ್ನೆ ಬ್ಯಾಟಿಂಗ್ ಆರಂಭಿಸಿ 39ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಹರಿಣಗಳ ತಂಡ, ಇಂದು ಬ್ಯಾಟಿಂಗ್ ಆರಂಭಿಸಿತ್ತು. ತಂಡಕ್ಕೆ ಡೀನ್ ಎಲ್ಗರ್ ಹಾಗೂ ಕ್ಯಾಪ್ಟನ್ ಡು ಪ್ಲೆಸಿಸ್ 115ರನ್ಗಳ ಉತ್ತಮ ಜೊತೆಯಾಟ ನೀಡಿದರು. 55ರನ್ಗಳಿಸಿದ್ದ ವೇಳೆ ಪ್ಲೆಸಿಸ್ ವಿಕೆಟ್ ಉರುಳುತ್ತಿದ್ದಂತೆ ಮೈದಾನಕ್ಕಿಳಿದ ಕ್ವಿಂಟನ್ ಡಿಕಾಕ್ ಜೊತೆ ಎಲ್ಗರ್ ತಮ್ಮ ಬ್ಯಾಟಿಂಗ್ ಮುಂದುವರಿಸಿದರು.
ಇದೇ ವೇಳೆ ಜವಾಬ್ದಾರಿಯುತ ಶತಕ ಸಿಡಿಸಿದ ಎಲ್ಗರ್ (160ರನ್)ಒಂಬತ್ತು ವರ್ಷಗಳ ಬಳಿಕ ಭಾರತದ ನೆಲದಲ್ಲಿ ಈ ಸಾಧನೆ ಮಾಡಿದ ಹಿರಿಮೆಗೆ ಒಳಗಾದರು. ಇದರ ಬೆನ್ನಲ್ಲೆ ಡಿಕಾಕ್ ಸಹ ಶತಕ(111ರನ್)ಸಾಧನೆ ಮಾಡಿದರು. ಹೀಗಾಗಿ ಸುಲಭ ಗೆಲುವಿನ ಕನಸು ಕಾಣುತ್ತಿದ್ದ ಭಾರತಕ್ಕೆ ನಿರಾಸೆಯಾಗಿದೆ.
ಇದಾದ ಬಳಿಕ ಫಿಲ್ಯಾಂಡರ್(0)ವಿಕೆಟ್ ಒಪ್ಪಿಸಿದ್ದಾರೆ. ಸದ್ಯ ಮುತ್ತುಸ್ವಾಮಿ(12ರನ್), ಮಹಾರಾಜ್(3ರನ್)ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದು, ಇನ್ನು 117ರನ್ಗಳ ಹಿನ್ನಡೆಯಲ್ಲಿದೆ. ಭಾರತದ ಪರ ಆರ್ ಅಶ್ವಿನ್ 5ವಿಕೆಟ್, ಜಡೇಜಾ 2ವಿಕೆಟ್ ಪಡೆದುಕೊಂಡಿದ್ದು, ಇಶಾಂತ್ ಶರ್ಮಾ 1ವಿಕೆಟ್ ಕಿತ್ತಿದ್ದಾರೆ.