ಪುಣೆ (ಮಹಾರಾಷ್ಟ್ರ) : ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ 2ನೇ ಪಂದ್ಯದಲ್ಲಿ 6 ವಿಕೆಟ್ಗಳ ಅಂತರದಿಂದ ಟೀಂ ಇಂಡಿಯಾದ ವಿರುದ್ಧ ಆಂಗ್ಲ ಪಡೆ ಜಯ ಸಾಧಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಾನಿ ಬೈರ್ಸ್ಟೋವ್(112 ಎಸೆತಗಳಲ್ಲಿ 124 ರನ್ ) ಬೆನ್ಸ್ಟೋಕ್ಸ್ (52 ಎಸೆತಗಳಲ್ಲಿ 99 ರನ್) ಹಾಗೂ ಜಾಸನ್ ರಾಯ್ (52 ಎಸೆತಗಳಲ್ಲಿ 55 ರನ್) ಗಳಿಸಿ ಸ್ಫೋಟಕ ಆಟವಾಡುವ ಮೂಲಕ ಇಂಗ್ಲೆಂಡ್ ಸರಣಿ ಸಮಬಲ ಸಾಧಿಸಲು ಕೊಡುಗೆ ನೀಡಿದ್ದಾರೆ. ಕೇವಲ ನಾಲ್ಕು ವಿಕೆಟ್ ನಷ್ಟದಲ್ಲಿ ಗುರಿನ ತಲುಪಲು ಸಾಧ್ಯವಾಗಿದೆ.
ಹೊರೆಯಾದ ಕೃನಾಲ್ ಪಾಂಡ್ಯಾ ಬೌಲಿಂಗ್ : ಭಾರತದ ಬೌಲಿಂಗ್ ವಿಭಾಗ ಕಳಪೆ ಮಟ್ಟದ ಪ್ರದರ್ಶನ ತೋರಿದ್ದು, ಭುವನೇಶ್ವರ್ ಕುಮಾರ್ 10 ಓವರ್ಗಳಲ್ಲಿ 63 ರನ್ ಕೊಟ್ಟು ಒಂದು ವಿಕೆಟ್ ಗಳಿಸಲು ಮಾತ್ರ ಸಫಲರಾಗಿದ್ದಾರೆ. ಪ್ರಸಿದ್ಧ್ ಕೃಷ್ಣ 10 ಓವರ್ನಲ್ಲಿ 58 ರನ್ ಕೊಟ್ಟು 2 ವಿಕೆಟ್ ಗಳಿಸಿದ್ದಾರೆ.
ಕೃನಾಲ್ ಪಾಂಡ್ಯ 6 ಓವರ್ಗೆ 72 ರನ್ ನೀಡುವ ಮೂಲಕ ಇಂಗ್ಲೆಂಡ್ ಗೆಲುವಿನ ಹಾದಿ ಸುಗಮ ಮಾಡಿಕೊಟ್ಟಿದ್ದಾರೆ. ಕುಲದೀಪ್ ಯಾದವ್ ಮತ್ತು ಶಾರ್ದುಲ್ ಠಾಕೂರ್ ಕೂಡಾ ವಿಕೆಟ್ ಕಬಳಿಸಲು ವಿಫಲರಾಗಿದ್ದಾರೆ.
ಭಾರತದ ಬ್ಯಾಟಿಂಗ್, ರಾಹುಲ್ ಶತಕ ವ್ಯರ್ಥ : ಸಾಕಷ್ಟು ಟೀಕೆಗಳ ನಂತರ ಅದ್ಭುತ ಫಾರ್ಮ್ಗೆ ಬಂದಿರುವ ಕೆ.ಎಲ್.ರಾಹುಲ್ 108 ಎಸೆತಗಳಲ್ಲಿ ರಾಹುಲ್ ಶತಕ ಬಾರಿಸಿದ್ದು, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ರಾಹುಲ್ಗೆ ರಿಷಬ್ ಪಂತ್ ಅದ್ಭುತ ಜೊತೆಯಾಟ ನೀಡಿದ್ದು, ಭರ್ಜರಿ ಅರ್ಧಶತಕ ಪೇರಿಸಿದ್ದಾರೆ (34 ಎಸೆತಗಳಲ್ಲಿ 63).
ವಿರಾಟ್ ಕೊಹ್ಲಿ 79 ಎಸೆತಗಳಲ್ಲಿ 66 ರನ್, ರೋಹಿತ್ ಶರ್ಮಾ 25 ಎಸೆತಗಳಲ್ಲಿ 25 ರನ್, ಶಿಖರ್ ಧವನ್ 17 ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದಾರೆ. ಇಂಗ್ಲೆಂಡ್ ತಂಡದ ಬೌಲಿಂಗ್ ಅಷ್ಟೇನೂ ಪರಿಣಾಮಕಾರಿ ಅಲ್ಲದಿದ್ದರೂ, ಬ್ಯಾಟಿಂಗ್ ಪಿಚ್ನಲ್ಲಿ ಆದಷ್ಟೂ ಭಾರತದ ದಾಂಡಿಗರನ್ನು ಕಟ್ಟಿ ಹಾಕಲು ಸಫಲರಾಗಿದ್ದಾರೆ.
ರೀಸ್ ಟೋಪ್ಲೆ ಮತ್ತು ಟಾಮ್ ಕುರ್ರಾನ್ ತಲಾ ಎರಡು ವಿಕೆಟ್ ಪಡೆದರೆ, ಆದಿಲ್ ರಶೀದ್ ಮತ್ತು ಸ್ಯಾಮ್ ಕುರ್ರಾನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಮಾರ್ಚ್ 28ಕ್ಕೆ 'ಫೈನಲ್' ಪಂದ್ಯ..: ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸಮಬಲ ಸಾಧಿಸಿರುವ ಕಾರಣದಿಂದ ಮುಂದಿನ ಪಂದ್ಯ ಮತ್ತಷ್ಟು ಕುತೂಹಲಕಾರಿಯಾಗಿರಲಿದೆ. ಮಾರ್ಚ್ 28ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನ ಕ್ರೀಡಾಂಗಣದಲ್ಲೇ ಪಂದ್ಯ ನಡೆಯಲಿದ್ದು, ಭಾರತ ಮತ್ತಷ್ಟು ತಯಾರಿ ನಡೆಸಬೇಕಿದೆ.