ಕೋಲ್ಕತ್ತಾ: ಭಾರತ-ಬಾಂಗ್ಲಾದೇಶ ನಡುವಿನ ಅಂತಿಮ ಟೆಸ್ಟ್ ಹೊನಲು ಬೆಳಕಿನಲ್ಲಿ ನಡೆಯಲಿದೆ. ಇದು ಸದ್ಯ ಕ್ರಿಕೆಟ್ ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದೆ. ಇದೇ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ.
ಬಹುತೇಕ ಪ್ರತೀ ಪಂದ್ಯದಲ್ಲೂ ದಾಖಲೆಯನ್ನು ಬರೆಯುತ್ತಾ ಮುನ್ನುಗ್ಗುತ್ತಿರುವ ಕೊಹ್ಲಿ ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ಐತಿಹಾಸಿಕ ಪಂದ್ಯದಲ್ಲಿ 32ರನ್ ಕಲೆಹಾಕಿದರೆ ನಾಯಕನಾಗಿ 5000 ರನ್ ಗಡಿಮುಟ್ಟಲಿದ್ದಾರೆ.
ಪ್ರಸ್ತುತ 52 ಪಂದ್ಯಗಳಿಂದ (85 ಇನ್ನಿಂಗ್ಸ್) 4968 ರನ್ ಗಳಿಸಿರುವ ಕೊಹ್ಲಿ ಈ ದಾಖಲೆಗೆ ಭಾಜನರಾಗುತ್ತಿರುವ ಮೊದಲ ಭಾರತೀಯ ಕಪ್ತಾನ್ ಎನ್ನುವುದು ವಿಶೇಷ. ಒಟ್ಟಾರೆ ವಿಶ್ವಕ್ರಿಕೆಟ್ನಲ್ಲಿ ಕೊಹ್ಲಿ ಟೆಸ್ಟ್ನಲ್ಲಿ 5000 ರನ್ ಗಳಿಸಿದ 6ನೇ ನಾಯಕನಾಗಲಿದ್ದಾರೆ. ಗ್ರೇಮ್ ಸ್ಮಿತ್, ಅಲನ್ ಬಾರ್ಡರ್, ರಿಕಿ ಪಾಂಟಿಂಗ್, ಕ್ಲೈವ್ ಲಾಯ್ಡ್ ಹಾಗೂ ಸ್ಟೀವ್ ಫ್ಲೆಮಿಂಗ್ ಈಗಾಗಲೇ ಈ ಗಡಿ ದಾಟಿದ ಹಿರಿಯ ಆಟಗಾರರು.
ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನವೆಂಬರ್ 22ರಂದು ಕೋಲ್ಕತಾದ ಈಡನ್ ಗಾರ್ಡನ್ನಲ್ಲಿ ಅರಂಭವಾಗಲಿದೆ.