ರಾಜ್ಕೋಟ್: ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿ ಜೀವಂತವಾಗಿಟ್ಟುಕೊಳ್ಳಬೇಕಾದ ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ಟೀಂ ಇಂಡಿಯಾಗೆ ಸುಲಭ ಗೆಲುವು ತಂದಿಟ್ಟಿದ್ದು, ಈ ಮೂಲಕ ಕೊನೆಯ ಪಂದ್ಯ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ಗಳಿಕೆ ಮಾಡ್ತು. ಆರಂಭದಲ್ಲೇ ಟೀಂ ಇಂಡಿಯಾ ಬೌಲಿಂಗ್ ಶಕ್ತಿಯನ್ನು ಸುಲಭವಾಗಿ ಎದುರಿಸಿದ ಬಾಂಗ್ಲಾ ಆರಂಭಿಕರಾದ ಲಿಟನ್ ದಾಸ್ ಹಾಗೂ ಮೊಹಮ್ಮದ್ ನಯೀಮ್ 60 ರನ್ಗಳ ಜೊತೆಯಾಟ ನೀಡಿದ್ರು. ಇದಾದ ಬಳಿಕ ಬಂದ ಸೌಮ್ಯ ಸರ್ಕಾರ್ (30) ಹಾಗೂ ಮುಹಮ್ಮದುಲ್ಲಾ(30) ಅಬ್ಬರಿಸಿದ್ದರಿಂದ ತಂಡ 150ರ ಗಡಿ ದಾಟಲು ಸುಲಭವಾಯಿತು. ಕೊನೆಯದಾಗಿ ತಂಡ 153 ರನ್ಗಳಿಕೆ ಮಾಡಿ ರೋಹಿತ್ ಪಡೆಗೆ 154ರನ್ ಟಾರ್ಗೆಟ್ ನೀಡಿತು.
ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಸ್ಪೋಟಕ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಹಾಗೂ ಶಿಖರ್ ಧವನ್ ಎದುರಾಳಿ ಬೌಲರ್ಗಳನ್ನು ಚೆಂಡಾಡಿದ್ರು. ಕೇವಲ 23 ಎಸೆತ ಎದುರಿಸಿದ ರೋಹಿತ್ ಶರ್ಮಾ 50 ರನ್ಗಳಿಕೆ ಮಾಡಿದರು. ಇದಾದ ಬಳಿಕ ತಮ್ಮ ಆಟಕ್ಕೆ ಮತ್ತಷ್ಟು ವೇಗ ನೀಡಿದ ರೋಹಿತ್ ಬಾಂಗ್ಲಾ ಬೌಲರ್ ಮೊಸಡಕ್ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮಿಂಚಿದರು.
ಮತ್ತೊಂದೆಡೆ 31 ರನ್ಗಳಿಕೆ ಮಾಡಿದ್ದ ಶಿಖರ್ ಧವನ್ ಅಮಿನುಲ್ಲಾ ಇಸ್ಲಾಂ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ರು. ಈ ವೇಳೆ ತಂಡದ ಸ್ಕೋರ್ 10.5 ಓವರ್ಗಳಲ್ಲಿ 118ರನ್ ಆಗಿತ್ತು. ಇದಾದ ಬಳಿಕ ದೊಡ್ಡ ಹೊಡೆತಕ್ಕೆ ಮುಂದಾದ ರೋಹಿತ್ ಶರ್ಮಾ 85 ರನ್ಗಳಿಕೆ ಮಾಡಿದ್ದ ವೇಳೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ನಿರ್ಗಮಿಸಿದರು. ರೋಹಿತ್ 43 ಎಸೆತಗಳನ್ನೆದುರಿಸಿ 6 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 85ರನ್ಗಳಿಸಿದರು.
ಇದಾದ ಬಳಿಕ ಮೈದಾನ ಹಂಚಿಕೊಂಡ ಕೆ.ಎಲ್. ರಾಹುಲ್ (7) ಹಾಗೂ ಶ್ರೇಯಸ್ ಅಯ್ಯರ್ (22) ರನ್ ಗಳಿಸೋ ಮೂಲಕ 15.4 ಓವರ್ಗಳಲ್ಲಿ 154 ರನ್ಗ ಮಾಡಿ ತಂಡಕ್ಕೆ 8 ವಿಕೆಟ್‌ಗಳ ಗೆಲುವು ತಂದಿಟ್ಟರು.
ಟೀಂ ಇಂಡಿಯಾ ಪರ ಚಹಾಲ್ 2 ವಿಕೆಟ್, ದೀಪಕ್ ಚಹಾರ್, ಅಹ್ಮದ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1ವಿಕೆಟ್ ಪಡೆದುಕೊಂಡರೆ, ಬಾಂಗ್ಲಾ ಪರ ಅಮೀನುಲ್ಲಾ ಇಸ್ಲಾಂ 2ವಿಕೆಟ್ ಪಡೆದುಕೊಂಡರು.