ಕೋಲ್ಕತ್ತಾ: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಮಹತ್ತರ ಬದಲಾವಣೆ ತರಲು ಬಯಸಿದ್ದು, ಕ್ರಿಕೆಟ್ನ ಅಸ್ಥಿತ್ವ ತಂದುಕೊಟ್ಟ ಟೆಸ್ಟ್ ಕ್ರಿಕೆಟ್ ಅನ್ನು ಮತ್ತೆ ಪ್ರಸಿದ್ದಗೊಳಿಸಲು ಹಗಲು ರಾತ್ರಿ ಪಂದ್ಯವನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಸಿಸಿಐ ಚುಕ್ಕಾಣಿ ಹಿಡಿದ ಕೇವಲ ಒಂದೇ ವಾರದಲ್ಲಿ ಗಂಗೂಲಿ ಟೆಸ್ಟ್ ಪಂದ್ಯವನ್ನು ಹಗಲು ರಾತ್ರಿ ಕಾಲಮಾನದಲ್ಲಿ ನಡೆಸಲು ಯಶಸ್ವಿಯಾಗಿದ್ದಾರೆ. ಮುಂಬರುವ ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯ ಭಾರತದ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯವಾಗಲಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಈ ವಿಚಾರವಾಗಿ ಸಭೆ ನಡೆಸಿದ್ದ ಗಂಗೂಲಿ ಅವರ ಅಭಿಪ್ರಾಯವನ್ನು ಪಡೆದು ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಜೊತೆಗೂ ಮಾತನಾಡಿ ದಾದಾ ಹಗಲು ರಾತ್ರಿ ಪಂದ್ಯಕ್ಕೆ ಉಪಖಂಡದಲ್ಲಿ ನಾಂದಿ ಹಾಡಿದ್ದಾರೆ.
ಇದರ ಜೊತೆಗೆ ಹಗಲು ರಾತ್ರಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸುವುದಕ್ಕೂ ಎರಡೂ ದೇಶಗಳ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದ್ದು, ನವೆಂಬರ್ 22 ರಿಂದ ನಡೆಯುವ ಟೆಸ್ಟ್ ಪಂದ್ಯ ಇತಿಹಾಸದ ಪುಟ ಸೇರಲಿದೆ.
ಈ ಐತಿಹಾಸಿಕ ಪಂದ್ಯಕ್ಕೆ ಒಲಿಂಪಿಕ್ ಪದಕ ವಿಜೇತರಾದ ಶೂಟರ್ ಅಭಿನವ್ ಬಿಂದ್ರಾ, ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಬ್ರೆಸ್ಟ್ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಪಿಂಕ್ ಬಾಲ್ ಟೆಸ್ಟ್ ಆಯೋಜಿಸಲಾಗುತ್ತಿದೆ.