ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆ ಮಾಡಿದ್ದ ವೇಳೆ ಆಯ್ಕೆ ಸಮಿತಿ ವಿರುದ್ಧ ಸೌರವ್ ಗಂಗೂಲಿ ಆಕ್ರೋಶ ಹೊರಹಾಕಿ, ಎಲ್ಲಾ ಮಾದರಿಯಲ್ಲೂ ಆಡಬಲ್ಲ ಅನೇಕ ಪ್ಲೇಯರ್ಸ್ ತಂಡದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದೀಗ ಇದಕ್ಕೆ ಟೀಂ ಇಂಡಿಯಾ ಟೆಸ್ಟ್ನ ಉಪ ಕ್ಯಾಪ್ಟನ್ ಒಪ್ಪಿಗೆ ಸೂಚಿಸಿದ್ದಾರೆ.
ಟಿವಿ ಸಂದರ್ಶದಲ್ಲಿ ಭಾಗಿಯಾಗಿ ಮಾತನಾಡಿರುವ ಅಜಿಂಕ್ಯ ರಹಾನೆ, ಟೆಸ್ಟ್ನಲ್ಲಿ ಆಡುವ ಕೆಲ ಪ್ಲೇಯರ್ಸ್, ಏಕದಿನ ಹಾಗೂ ಟಿ -20ಯಲ್ಲೂ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದು, ಅವರಿಗೆ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ. ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಕೆಲ ಆಟಗಾರರು ಆಡುವುದರಿಂದ ಅವರಿಗೆ ಆತ್ಮವಿಶ್ವಾಸ ಹೆಚ್ಚಾಗುವುದರ ಜತೆಗೆ ಅದ್ಭುತ ಪ್ರದರ್ಶನ ನೀಡಲು ಸಮಯ ಸಿಗುತ್ತದೆ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶುಬ್ಮನ್ ಗಿಲ್ ಹಾಗೂ ಅಜಿಂಕ್ಯ ರಹಾನೆಗೆ ಅವಕಾಶ ನೀಡದ್ದಕ್ಕಾಗಿ ಗರಂ ಆಗಿದ್ದ ಗಂಗೂಲಿ ಈ ರೀತಿಯ ಹೇಳಿಕೆ ನೀಡಿದ್ದರು. ಇದರ ಜತೆಗೆ ಜೊತೆಗೆ ಭಾರತದ ಆಯ್ಕೆ ಸಮಿತಿಯೂ ಆಟಗಾರರ ಲಯ ಮತ್ತು ಆತ್ಮವಿಶ್ವಾಸ ನೋಡಿಕೊಂಡು ಎಲ್ಲ ಮಾದರಿಯ ಪಂದ್ಯಗಳಿಗೂ ಒಂದೇ ಆಟಗಾರರನ್ನು ಆಯ್ಕೆ ಮಾಡುವ ಸಮಯ ಬಂದಿದೆ. ಭಾರತದಲ್ಲಿ ಕೆಲ ಆಟಗಾರರು ಮಾತ್ರ ಎಲ್ಲ ಸ್ವರೂಪಗಳಲ್ಲಿ ಆಡುತ್ತಿದ್ದಾರೆ. ದೊಡ್ಡ ದೊಡ್ಡ ತಂಡಗಳು ಸ್ಥಿರ ಆಟಗಾರರನ್ನು ಹೊಂದಿರಬೇಕು. ಈ ಆಯ್ಕೆ ಎಲ್ಲರನ್ನು ಸಂತೋಷಪಡಿಸುವುದರ ಬದಲು ದೇಶಕ್ಕಾಗಿ ಮತ್ತು ಸ್ಥಿರ ಪ್ರದರ್ಶನಕ್ಕಾಗಿ ಇರಬೇಕು ಎಂದು ಟ್ವೀಟ್ ಮಾಡಿದ್ದರು.
ಕಳೆದ ಕೆಲ ವರ್ಷಗಳಿಂದ ಅಜಿಂಕ್ಯ ರಹಾನೆ ಕೇವಲ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಬ್ಯಾಟ್ ಬೀಸುತ್ತಿದ್ದು, ಅವರಿಗೆ ಏಕದಿನ ಹಾಗೂ ಟಿ-20 ಕ್ರಿಕೆಟ್ನಲ್ಲಿ ಅವಕಾಶ ಸಿಗುತ್ತಿಲ್ಲ.