ಬೆಳಗಾವಿ: ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ ಅವರ ಅಜೇಯ ಶತಕದ ನೆರವಿನಿಂದ ಶ್ರೀಲಂಕಾ ಎ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ ಬೃಹತ್ ಮೊತ್ತ ಕಲೆಹಾಕಿದೆ.
ಬೆಳಗಿನ ಜಾವ ಸುರಿದ ಭಾರೀ ಮಳೆಯಿಂದ ಪಂದ್ಯ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು. ಉಭಯ ತಂಡಗಳ ತಲಾ 8 ಓವರ್ ಕಡಿತಗೊಳಿಸಿ ಪಂದ್ಯ ಪ್ರಾರಂಭ ಮಾಡಲಾಯ್ತು.
ಟಾಸ್ ಗೆದ್ದ ಶ್ರೀಲಂಕಾ ತಂಡದ ಬೌಲಿಂಗ್ ಆಯ್ದುಕೊಂಡಿತು. ಭಾರತ ತಂಡ ನಿಗದಿತ 42 ಓವರ್ಗೆ 4 ವಿಕೆಟ್ ಕಳೆದುಕೊಂಡು 317 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಭಾರತದ ಆರಂಭಿಕ ಋತುರಾಜ್ 136 ಎಸೆತಗಳಲ್ಲಿ 26 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ 187 ರನ್ ದಾಖಲಿಸಿ ಅಜೇಯರಾದರು. ಬೆಳಗಾವಿಯಲ್ಲಿ ಕಳೆದ ವಾರ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದ ಅನ್ಮೋಲ್ ಪ್ರೀತ್ ಸಿಂಗ್ ಇಂದು 67 ಎಸೆತಗಳಲ್ಲಿ 65 ರನ್ ದಾಖಲಿಸಿ ತಂಡಕ್ಕೆ ನೆರವಾದರು. ನಾಯಕ ಇಶಾನ್ ಕಿಶನ್ 34 ಎಸೆತಗಳಲ್ಲಿ 45 ರನ್ ಗಳಿಸಿ ಗಮನ ಸೆಳೆದರು. ಲಂಕಾ ಪರ ಲಹೀರು ಕುಮಾರಾ 3 ವಿಕೆಟ್ ಪಡೆದು ಮಿಂಚಿದ್ರು.
ಬೃಹತ್ ಮೊತ್ತದ ಸವಾಲು ಬೆನ್ನು ಹತ್ತಿರುವ ಶ್ರೀಲಂಕಾ ಎ ತಂಡ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ನಡೆಸುತ್ತಿದೆ.