ಲಖನೌ: ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧದ ಏಕದಿನ ಸರಣಿಯಲ್ಲಿ 1- 4 ರಿಂದ ಹಿನಾಯ ಸೋಲು ಅನುಭವಿಸಿರುವ ಭಾರತ ಮಹಿಳಾ ತಂಡ, ಟಿ-20 ಸರಣಿಯಲ್ಲೂ ಕೂಡಾ, ಕಳಪೆ ಪ್ರದಶ್ನ ನೀಡಿ 3 ಪಂದ್ಯಗಳ ಸರಣಿಯಲ್ಲಿ 2-0 ದಿಂದ ಸರಣಿ ಬಿಟ್ಟು ಕೊಟ್ಟಿದೆ. ಇಂದು ಟಿ-20 ಕೊನೆಯ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನಾದರೂ ಗೆಲ್ಲುವ ಮೂಲಕ ಗೌರವ ಉಳಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.
ಏಕದಿನ ಸರಣಿಯಲ್ಲಿ ಕಳಪೆ ಆಟವಾಡಿದ ಭಾರತ ತಂಡ ಟಿ-20 ಸರಣಿಯಲ್ಲಿ ಸವಾಲು ಎಸೆಯುವಲ್ಲಿ ಯಶಸ್ವಿಯಾಗಿಲ್ಲ. ಎರಡನೇ ಪಂದ್ಯದಲ್ಲಿ ಸ್ವಲ್ಪ ಮಟ್ಟಿನ ಫೈಟ್ ನೀಡಿದರು, ಪಂದ್ಯವನ್ನ ಗೆಲ್ಲಲಾಗದೇ ಸರಣಿ ಕಳೆದುಕೊಂಡಿತ್ತು. ಏಕಾನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮತ್ತೊಮ್ಮೆ ತಂಡ ತನ್ನ ಅದೃಷ್ಟದ ಜೊತೆಗೆ ಇಂದು ಗೌರವ ಉಳಿಸಿಕೊಳ್ಳಲು ಆಡಬೇಕಾಗಿದೆ.
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯನ್ನು 1-4 ರಲ್ಲಿ ಮಿಥಾಲಿ ಬಳಗ ಕಳೆದುಕೊಂಡಿತ್ತು. ಟಿ-20ಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದು, ಯುವ ಆಟಗಾರ್ತಿಯರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಭರ್ಜರಿ ಆಟವಾಡಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಸಾಥ್ ಬರುತ್ತಿಲ್ಲ, ಇತ್ತ ಬೌಲಿಂಗ್ ವಿಭಾಗದಲ್ಲೂ ಕೂಡಾ ಯಾವುದೇ ರೀತಿಯ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ಬರುತ್ತಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಭಾರತ ತಂಡ ಮೊದಲ ಬಾರಿ ದಕ್ಷಿಣ ಆಫ್ರಿಕಾ ಎದುರು ಟಿ-20 ಸರಣಿ ಸೋಲು ಕಂಡಿದೆ. ಹಂಗಾಮಿ ನಾಯಕಿ ಸ್ಮೃತಿ ಮಂದಾನ ಎದುರಾಳಿಗಳನ್ನು ನಿಯಂತ್ರಿಸುವ ತಂತ್ರ ಹೆಣೆಯುವಲ್ಲಿ ವಿಫಲರಾಗಿದ್ದಾರೆ. ಕಳಪೆ ಫೀಲ್ಡಿಂಗ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿಯರು ನಿರೀಕ್ಷಿತ ಮಟ್ಟದಲ್ಲಿ ಆಡದೇ ಇರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ಓದಿ : ಇಂದಿನಿಂದ ಏಕದಿನ ಸರಣಿ: ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಜತೆ ಭಾರತದ ಫೈಟ್!
ಓಪನರ್ಗಳಾದ ಹರ್ಲೀನ್ ಡಿಯೋಲ್ ಮತ್ತು ಶೆಫಾಲಿ ವರ್ಮಾ ಎರಡೂ ಪಂದ್ಯಗಳಲ್ಲಿ ವೇಗವಾಗಿ ರನ್ ಕಲೆ ಹಾಕಿದ್ದಾರೆ. ಆದರೆ, ಅನುಭವಿಗಳಾದ ಸ್ಮೃತಿ ಮಂದಾನ ಮತ್ತು ಜೆಮಿಮಾ ರೊಡ್ರಿಗಸ್ ಬ್ಯಾಟ್ನಿಂದ ಯಾವುದೇ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಬಂದಿಲ್ಲ. ಬೌಲರ್‌ಗಳು ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ವಿಫಲರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಲಿಜೆಲ್ ಲೀ, ಅನೆಕೆ ಬಾಷ್, ಮತ್ತು ಲೌರಾ ವೊಲ್ವರ್ಟ್ ಅವರು ಸ್ಫೋಟಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು ನಾಯಕಿ ಸುನೆ ಲೂಸ್ ಕೂಡ ಮಿಂಚುತ್ತಿದ್ದಾರೆ. ಶಬ್ನಿಮ್ ಇಸ್ಮಾಯಿಲ್ ಅವರೊಂದಿಗೆ ಬಾಶ್ ಬೌಲಿಂಗ್‌ನಲ್ಲೂ ಉತ್ತಮ ಸಾಮರ್ಥ್ಯ ತೊರುತ್ತಿದ್ದಾರೆ.
ಇಂದಿನ ಪಂದ್ಯ ಸಂಜೆ 7.00 ಗಂಟೆಗೆ ಆರಂಭವಾಗಲಿದೆ.
ತಂಡಗಳು: ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನಾ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ನುಜ್ಹತ್ ಪರ್ವೀನ್ (ವಿಕೆಟ್ ಕೀಪರ್) ಆಯುಶಿ ಸೋನಿ, ಅರುಂಧತಿ ರೆಡ್ಡಿ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಸಿ.ಪ್ರತ್ಯುಷಾ, ಸಿಮ್ರಾನ್ ದಿಲ್ ಬಹದ್ದೂರ್
ದಕ್ಷಿಣ ಆಫ್ರಿಕಾ ಮಹಿಳಾ ತಂಡ: ಸುನೆ ಲೂಸ್ (ಕ್ಯಾಪ್ಟನ್), ಅಯಬೊಂಗಾ ಖಕಾ, ಶಬ್ನಮ್ ಇಸ್ಮಾಯಿಲ್, ಲಾರಾ ವೊಲ್ವಾರ್ಡ್ಟ್, ತ್ರಿಶಾ ಚೆಟ್ಟಿ, ಸಿನಾಲೋವಾ ಜಾಫ್ತಾ, ಟ್ಯಾಸ್ಮಿನ್ ಬ್ರಿಟ್ಜ್, ಮಾರಿಜನ್ನೆ ಕಾಪ್, ನೊಂಡುಮಿಸೊ ಶಾಂಗೇಸ್, ಲಿಜೆಲ್ ಲೀ, ಅನೆಕೆ ಬಾಷ್, ಫಾಯೆ ನಾನ್ಕುನ್ಕ್ಲಿಫ್ ನಾಡಿನ್ ಡಿ ಕ್ಲರ್ಕ್, ಲಾರಾ ಗುಡಾಲ್, ತುಮಿ ಸೆಖುಖುನೆ.